ಬೆಂಗಳೂರು: ಹೊಸ ವರ್ಷದ ಹಿನ್ನೆಲೆ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನ್ಯೂ ಇಯರ್ ಗೆ ಕಿಕ್ಕೇರಿಸಲು ಶೇಖರಿಸಿಟ್ಟಿದ್ದ ಕೋಟಿ- ಕೋಟಿ ಡ್ರಗ್ ವಶಕ್ಕೆ ಪಡೆದಿದ್ದಾರೆ. ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 20 ಕೋಟಿ ಮೌಲ್ಯದ 10 ಕೆಜಿ ಎಂಡಿಎಂಎ ಸೀಜ್ ಮಾಡಲಾಗಿದ್ದು,
ಈ ಸಂಬಂಧ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ತಾಂಜೇನಿಯಾ ಮೂಲದ ನ್ಯಾನ್ಸಿ,ನೈಜಿರೀಯಾ ಎಮುನಲ್ ಅರೆಂಜಿ ಇಡಿಕೋ ಬಂಧಿತ ಆರೋಪಿಗಳಾಗಿದ್ದು, 2019ರಲ್ಲಿ ಟೂರಿಸ್ಟ್ ವಿಸಾದಡಿ ಭಾರತಕ್ಕೆ ಬಂದಿದ್ದ ನ್ಯಾನ್ಸಿ ಸಂಪಿಗೇಹಳ್ಳಿ ವ್ಯಾಪ್ತಿಯಲ್ಲಿ ವಾಸಿಸಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಳು.
ಎಮುನಲ್ ನಾಲ್ಕು ವರ್ಷಗಳ ಹಿಂದೆ ಬ್ಯುಸಿನೆಸ್ ವಿಸಾದಡಿ ಭಾರತಕ್ಕೆ ಬಂದು ಸಿದ್ದಾಪುರ ಪ್ರದೇಶದಲ್ಲಿ ನೆಲೆಸಿದ್ದು, ದೆಹಲಿಯಿಂದ ಡ್ರಗ್ ತರಿಸಿಕೊಂಡು ವಿದ್ಯಾರ್ಥಿಗಳು, ಸ್ಥಳೀಯರು, ಐಟಿ–ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದಾನೆ.
ನ್ಯೂ ಇಯರ್ ಸಂದರ್ಭದಲ್ಲಿ ಹೆಚ್ಚಿನ ಡಿಮ್ಯಾಂಡ್ ಬಳಸಿಕೊಳ್ಳುವ ಪ್ಲಾನ್ ಮಾಡಿದ್ದ ಆರೋಪಿಗಳ ಯೋಜನೆ ಸಿಸಿಬಿ ದಾಳಿಯಿಂದ ಭಗ್ನವಾಗಿದೆ. ಜೊತೆಗೆ ಚಾಮರಾಜಪೇಟೆ ಪೋಸ್ಟ್ ಆಫೀಸ್ನಲ್ಲಿ ಪರಿಶೀಲನೆಯ ವೇಳೆ ವಿದೇಶದಿಂದ ಬಂದಿದ್ದ 8 ಕೆಜಿ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಒಟ್ಟಾರೆ 28 ಕೋಟಿ ಮೌಲ್ಯದ ಡ್ರಗ್ಗಳನ್ನು ಸೀಜ್ ಮಾಡಿದ ಸಿಸಿಬಿ, ಪ್ರಕರಣದ ತನಿಖೆಯನ್ನು ವೇಗವಾಗಿ ಮುಂದುವರೆಸುತ್ತಿದೆ.



