ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹುಡ್ಕೋ ಬಡಾವಣೆಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಎಸ್ಎಸ್ಕೆ ಮಹಿಳಾ ಮಂಡಳದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಛಪ್ಪನ್ ಭೋಗ್ ನೈವೇದ್ಯ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸತ್ಯನಾರಾಯಣ ಪೂಜೆ ನೆರವೇರಿಸಲಾಗಿದ್ದು, ವಿಶೇಷವಾಗಿ ಛಪ್ಪನ್ ಭೋಗ್ ನೈವೇದ್ಯ ಅರ್ಪಿಸಲಾಯಿತು. ಮಹಿಳಾ ಮಂಡಳದ ಸದಸ್ಯೆಯರು ತಮ್ಮ ಮನೆಗಳಲ್ಲಿಯೇ ತಯಾರಿಸಿದ ವಿವಿಧ ಬಗೆಯ ಸಿಹಿ ಪದಾರ್ಥಗಳು, ಹಾಲಿನ ಖಾದ್ಯಗಳು, ಅನ್ನದ ವಿವಿಧ ತಿನಿಸುಗಳು, ಪಲ್ಯ, ತಿಂಡಿಗಳು, ಹಣ್ಣು ಹಾಗೂ ಒಣಹಣ್ಣುಗಳನ್ನು ಶ್ರೀ ಸತ್ಯನಾರಾಯಣ ಸ್ವಾಮಿಗೆ (ಕೃಷ್ಣನಿಗೆ) ನೈವೇದ್ಯವಾಗಿ ಅರ್ಪಿಸಿದರು.
ಬೆಳಿಗ್ಗೆ ಶ್ರೀ ಅಂಬಾಭವಾನಿ ಮಾತೆಗೆ ಅಭಿಷೇಕ ನೆರವೇರಿಸುವುದರೊಂದಿಗೆ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಬಳಿಕ ಸತ್ಯನಾರಾಯಣ ಪೂಜೆ, ಛಪ್ಪನ್ ಭೋಗ್ ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಶ್ರೀನಿವಾಸ ಭಟ್ಟರು ಎಲ್ಲ ಪೂಜಾ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಭಕ್ತರು ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಧ್ಯಕ್ಷ ಫಕ್ಕೀರಸಾ ಭಾಂಡಗೆ, ಚೇರ್ಮನ್ ಪರಶುರಾಮಸಾ ಬದಿ ಹಾಗೂ ಮಾರುತಿ ಪವಾರ್ ದೇವಸ್ಥಾನಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.



