ವಿಜಯಸಾಕ್ಷಿ ಸುದ್ದಿ, ಹರಪಹಳ್ಳಿ : ದಿನನಿತ್ಯ ಬೆಳಗಿನ ಸಮಯದಲ್ಲಿ ಸೈನಿಕರಂತೆ ಪಟ್ಟಣವನ್ನು ಸ್ವಚ್ಛಗೊಳಿಸುವ ಮೂಲಕ ಶುಚಿತ್ವ ಕಾಪಾಡತ್ತಿರುವ ಪೌರ ಕಾರ್ಮಿಕರು ವೈದ್ಯರಿದ್ದಂತೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಗಲೀಜು ಇರುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವಾಗ ಕೈಗವಸು, ಕಾಲಿಗೆ ಶೂಗಳನ್ನು ಕಡ್ಡಾಯವಾಗಿ ಧರಿಸಿ. ನೀವು ಯಾವದೇ ವಸ್ತುಗಳನ್ನು ಬಳಸದೆ ಕೆಲಸ ಮಾಡುವುದನ್ನು ನಾನು ಹಲವಾರು ಬಾರಿ ಗಮನಿಸಿದ್ದೇನೆ.
ಎಲ್ಲಾ ಪೌರಕಾರ್ಮಿಕರಿಗೆ ನಿವೇಶನಗಳನ್ನು ನೀಡಲು ಈಗಾಗಲೇ 5 ಎಕರೆಯಷ್ಟು ಭೂಮಿಯನ್ನು ಮೀಸಲಿರಿಸಿದ್ದು, 59 ಲಕ್ಷದಷ್ಟು ಹಣವನ್ನು ಮಂಜೂರು ಮಾಡಲಾಗಿದೆ. ಎಲ್ಲಾ ಸದಸ್ಯರ ಒಮ್ಮತದ ನಿರ್ಧಾರದ ನಂತರ ನಿವೇಶನ ಕಟ್ಟಿಕೊಡಲು ನಿರ್ಧರಿಸಲಾಗುದು ಹಾಗೂ ಸಂಕಷ್ಟ ಭತ್ಯೆಯನ್ನು ಕಾರ್ಮಿಕರಿಗೆ ನೀಡುವ ಕುರಿತು ಸರ್ಕಾರವು ಚಿಂತನೆ ನಡೆಸಿದೆ ಎಂದರು.
ಪುರಸಭೆ ಮಖ್ಯಾಧಿಕಾರಿ ಎರಗುಡಿ ಶಿವಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ನಗರಗಳನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರನ್ನು ಆರೋಗ್ಯಯುತವಾಗಿ ಇಡುವಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಚರಂಡಿ, ಮಲ-ಮೂತ್ರ, ಕಸಕಡ್ಡಿಗಳನ್ನು ಸ್ವಚ್ಛಗೊಳಿಸಲು ಎಲ್ಲರೂ ಅಸಹ್ಯ ಪಟ್ಟುಕೊಳ್ಳುತ್ತಾರೆ. ಆದರೆ ಪೌರ ಕಾರ್ಮಿಕರು ಯಾವುದರ ಬಗ್ಗೆಯೂ ಕೀಳರಿಮೆ ತೋರದೆ ಇರುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ ಎಂದರು.
ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ಪೌರ ಕಾರ್ಮಿಕರು ಈ ಹುದ್ದೆಯನ್ನು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಹೋಗಬಾರದು. ಸರ್ಕಾರದಿಂದ ನೀಡಲ್ಪಡುವ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಉನ್ನತ ಹುದ್ದೆಗೆ ಕಳುಹಿಸಿ. ಕೆಲ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಿ ಮೀಟರ್ ಬಡ್ಡಿಯಂತೆ ಹಣವನ್ನು ಪಡೆದು ದುಂದುವೆಚ್ಚ ಮಾಡುತ್ತಿದ್ದಾರೆ. ಅಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಸಂಸಾರವನ್ನು ಹಾಳುಮಾಡುವ ಬದಲು ಕುಡಿತವನ್ನು ನಿಯಮಿತಗೊಳಿಸಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಿ ಎಂದರು.
ಪೌರ ಕಾರ್ಮಿಕರ ಸಂಘಟನೆ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.