HomeAgricultureಅನಧಿಕೃತ ಪಂಪ್‌ಸೆಟ್‌ಗಳ ತೆರವು

ಅನಧಿಕೃತ ಪಂಪ್‌ಸೆಟ್‌ಗಳ ತೆರವು

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಾಗುವ ತುಂಗಭದ್ರಾ ನದಿ ಪಾತ್ರದ ತೆರದಹಳ್ಳಿ ಭಾಗದಲ್ಲಿ ರೈತರು ಬೆಳೆಗಳಿಗೆ ನೀರೆತ್ತಲು ಅಳವಡಿಸಿದ್ದ ಅನಧಿಕೃತ ಪಂಪ್‌ಸೆಟ್‌ಗಳನ್ನು ಬುಧವಾರ ಲಕ್ಷ್ಮೇಶ್ವರದ ತಹಸೀಲ್ದಾರ, ಪುರಸಭೆ ಮುಖ್ಯಾಧಿಕಾರಿ, ಹೆಸ್ಕಾಂ, ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ರೈತರ ಮನವೊಲಿಸಿ ತೆರವುಗೊಳಿಸಲಾಯಿತು.

ಕಳೆದ 2 ತಿಂಗಳಿಂದ ಕುಡಿಯುವ ನೀರಿಗಾಗಿ ಜನತೆ ಪರಿತಸಪಿಸುತ್ತಿದ್ದರೂ ನೀರೆತ್ತುವ ನದಿ ಪಾತ್ರದಲ್ಲಿ ಅನಧಿಕೃತ ಪಂಪ್‌ಸೆಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ವೇಳೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪುರಸಭೆ ಅಧಿಕಾರಿಗಳು ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದ್ದರು. ಇತ್ತೀಚೆಗೆ ನದಿಗೆ ನೀರು ಬಿಟ್ಟಿದ್ದರಿಂದ ಮತ್ತೆ ರೈತರು ನೀರೆತ್ತುವ ಜಾಕ್‌ವೆಲ್‌ಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದರು. ಲಕ್ಷ್ಮೇಶ್ವರ ಸೇರಿ ಗದಗ, ಶಿರಹಟ್ಟಿ, ಮುಂಡರಗಿ ತಾಲೂಕಿಗೆ ತುಂಗಭದ್ರಾ ನದಿ ನೀರೇ ಆಧಾರವಾಗಿದೆ. ಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯ ನಡುವೆಯೂ ಕುಡಿಯುವ ನೀರಿಗಾಗಿ ನದಿಗೆ ಬಿಟ್ಟಿರುವ ನೀರನ್ನು ಇನ್ನೂ 4 ತಿಂಗಳು ಮಳೆಗಾಲದವರೆಗೂ ಕಾಪಾಡಬೇಕಾಗಿದೆ.

ಇಂತಹ ಸಂದರ್ಭದಲ್ಲಿ ನದಿ ಪಾತ್ರದ ರೈತರು ಪಂಪ್‌ಸೆಟ್ ಮೂಲಕ ಯಥೇಚ್ಛವಾಗಿ ನೀರೆತ್ತುವುದರಿಂದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗುತ್ತದೆ. ನದಿಯಿಂದ ನೀರೆತ್ತುವ ಜಾಕ್‌ವೆಲ್ ಹತ್ತಿರ ನೀರು ಸಂಗ್ರಹಿಸುವ ಯಾವುದೇ ಮುಂಜಾಗೃತಾ ಕ್ರಮ ಕೈಗೊಂಡಿಲ್ಲ. ಜಾಕ್‌ವೆಲ್‌ಗೆ ಅನಧಿಕೃತ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದರೂ ನಿರ್ಲಕ್ಷ್ಯ ತಾಳಲಾಗಿತ್ತು. ಹೀಗೆಯೇ ಮುಂದುವರೆದರೆ ಜನತೆ ನೀರಿಗಾಗಿ ನಿತ್ಯ ಬಡಿದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಪಾಲಿಸಿ, ಸಂಬಂಧಿಸಿದ ಅಧಿಕಾರಿಗಳು ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.

pumpset

ಬುಧವಾರ ಬೆಳಿಗ್ಗೆಯೇ ತಹಸೀಲ್ದಾರ ವಾಸುದೇವ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಹೆಸ್ಕಾಂ ಅಧಿಕಾರಿ ಗುರುರಾಜ ಸಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಮಂಜುನಾಥ ಮುದಗಲ್ ಅವರು ತಮ್ಮ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ತೆರಳಿ ಅನಧಿಕೃತ ಪಂಪ್‌ಸೆಟ್ ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.

ಈ ವೇಳೆ ಆಗಮಿಸಿದ ರೈತರು ಪಂಪ್‌ಸೆಟ್ ತೆರವುಗಳಿಸದಂತೆ ಅಡ್ಡಿಪಡಿಸಿದ್ದರಿಂದ ಮಾತಿನ ಚಕಮಕಿಯೂ ನಡೆಯಿತು. ಅತ್ತ ರೈತರು ಹೆಸ್ಕಾಂ ಕಚೇರಿಯೆದುರು ಪ್ರತಿಭಟನೆಗೂ ಮುಂದಾದರು. ರೈತರ ಹಿತ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದ ಬೆಳೆಗೆ ನೀರು ನಿಲ್ಲಿಸಿದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಈ ಭಾಗದ ರೈತರಿಗೆ ನಯಾಪೈಸೆ ಪರಿಹಾರವನ್ನೂ ಕೊಡುವುದಿಲ್ಲ. ನಾವು ಸತ್ತರೂ ಸರಿ ಪಂಪ್‌ಸೆಟ್ ತೆರವುಗೊಳಿಸುವುದಿಲ್ಲ ಎಂದುೆ್ ಪಟ್ಟು ಹಿಡಿದರು.

ಈ ವೇಳೆ ಅಧಿಕಾರಿಗಳು ಕುಡಿಯುವ ನೀರಿಗೆ ಸಮಸ್ಯೆ ಇದ್ದಾಗ ರೈತರು ಪಂಪ್‌ಸೆಟ್‌ನಿಂದ ನೀರತ್ತದಂತೆ ತಡೆಯಬೇಕು ಎಂದು ಸರ್ಕಾರದ ಆದೇಶವಿದೆ. ಜಿಲ್ಲೆಯ 5 ತಾಲೂಕುಗಳ ಜನರು ನೀರಿಗಾಗಿ ಪರದಾಡುವ ಸ್ಥಿತಿಯಿದೆ. ಅವರೂ ನಿಮ್ಮ ಬಂಧುಗಳೇ. ಜೀವ ಇದ್ದರೆ ಜೀವನ. ಆದ್ದರಿಂದ ಮಳೆಗಾಲದವರೆಗೂ ನದಿ ಪಾತ್ರ ರೈತರು ಪಂಪ್‌ಸೆಟ್ ಅಳವಡಿಸದಂತೆ ಸಹಕಾರ ನೀಡಿ ಎಂದು ತಿಳಿ ಹೇಳಿದ ಬಳಿಕ ಪಂಪ್‌ಸೆಟ್ ತೆರವುಗೊಳಿಸಲು ಒಪ್ಪಿದರು.

ಪ್ರತಿ ವರ್ಷ ಬೇಸಿಗೆಯಲ್ಲಿ ನಾಲ್ಕೈದು ತಿಂಗಳು ನದಿ ನೀರು ಸರಬರಾಜಿನಲ್ಲಿ ವ್ಯತ್ಯಯ ಸಾಮಾನ್ಯವಾಗಿದೆ. ಈ ವರ್ಷ ಮಳೆ ಕೊರತೆ, ಅಂತರ್ಜಲಮಟ್ಟ ಕುಸಿತ, ಕೆರೆ-ಕಟ್ಟೆಗಳಲ್ಲ ಹನಿ ನೀರು ಇಲ್ಲದ್ದರಿಂದ ಸಮಸ್ಯೆ ಮತ್ತಷ್ಟುಟ್ಹೆಚ್ಚಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಇದ್ದ ನೀರನ್ನೇ ಕಾಪಾಡಲು ಪಂಪ್‌ಹೌಸ್ ಹತ್ತಿರ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾರೇಜ್ ನಿರ್ಮಿಸಲು ಅನುದಾನ ಕೋರಿ ಜಿಲ್ಲಾಧಿಕಾರಿಗಳಿಗೆ ಮತ್ತು ಪಂಪ್‌ಸೆಟ್ ಅಳವಡಿಸದಂತೆ ಕಾಯಲು ಪೊಲೀಸ್ ಸಿಬ್ಬಂದಿಗಳನ್ನುನಿಯೋಜಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು.
– ವಾಸುದೇವ ಸ್ವಾಮಿ-ತಹಸೀಲ್ದಾರರು.
ಮಹೇಶ ಹೆಚ್-ಮುಖ್ಯಾಧಿಕಾರಿ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!