ಬೆಂಗಳೂರು: ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕರ್ನಾಟಕ ಸರ್ಕಾರ ಹೇರಿದ್ದ ಒಂದು ವರ್ಷದ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಿದೆ. ನಿಷೇಧ ಜಾರಿಗೆ ಬಂದ ಕೇವಲ ಎರಡು ದಿನಗಳಲ್ಲೇ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಹಾಗೂ ಮಾರಾಟಕ್ಕೆ ಆಹಾರ ಸುರಕ್ಷತಾ ಆಯುಕ್ತರು ಒಂದು ವರ್ಷದ ಅವಧಿಗೆ ನಿಷೇಧ ಹೇರಿದ್ದರು.
ನಿಷೇಧದ ಆದೇಶವನ್ನು ತಮ್ಮ ಗಮನಕ್ಕೆ ತರದೇ ಹೊರಡಿಸಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ನಿಷೇಧದಿಂದ ಅಡಿಕೆ ಬೆಳೆಗಾರರು ಸೇರಿದಂತೆ ಹಲವು ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಗುಟ್ಕಾ ನಿಷೇಧ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿತ್ತು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ ನೇತೃತ್ವದಲ್ಲಿ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿತ್ತು.
ಸರ್ಕಾರದ ನಿರ್ಧಾರದಿಂದ ಅಡಿಕೆ ಬೆಳೆಗಾರರಲ್ಲಿ ಆತಂಕ ಉಂಟಾಗಿದ್ದು, ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿಯೋಗ ಮುಖ್ಯಮಂತ್ರಿ ಗಮನಕ್ಕೆ ತಂದಿತ್ತು. ನಿಷೇಧದಿಂದ ಉಂಟಾಗಬಹುದಾದ ಆರ್ಥಿಕ ನಷ್ಟದಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ರೈತರ ಹಿತ ಹಾಗೂ ಮಾರುಕಟ್ಟೆಯ ಮೇಲಿನ ಪರಿಣಾಮವನ್ನು ಪರಿಗಣಿಸಿರುವ ಸರ್ಕಾರ, ನಿಷೇಧ ಆದೇಶವನ್ನು ಹಿಂಪಡೆಯಲು ಮುಂದಾಗಿದೆ.



