ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಒಂದು, ಎರಡು ಮತ್ತು ಮೂರು ತಲೆಮಾರುಗಳ ಕುಟುಂಬ ಸದಸ್ಯರ ಗಣತಿ ಕಾರ್ಯವನ್ನು ಸರ್ಕಾರ ಸಮಗ್ರವಾಗಿ ಪೂರ್ಣಗೊಳಿಸಿ, ಅರ್ಹ ಎಲ್ಲ ಕುಟುಂಬಗಳನ್ನು ಅಧಿಕೃತವಾಗಿ ಗುರುತಿಸಬೇಕು ಎಂದು ತಾಲೂಕು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಕೆ. ಅಂಜಿನಮ್ಮ ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಇತ್ತೀಚೆಗೆ ಕೈಗೊಂಡಿರುವ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರುಗಳ ಕುಟುಂಬ ಸದಸ್ಯರ ಗಣತಿ ಕಾರ್ಯ ಇನ್ನೂ ಅಪೂರ್ಣವಾಗಿದ್ದು, ಸಮಗ್ರವಾಗಿ ನಡೆದಿಲ್ಲ ಎಂದು ಆರೋಪಿಸಿದರು.
2007ರಲ್ಲಿ ನಡೆದ ಗಣತಿ ಅಸಮರ್ಪಕವಾಗಿದ್ದು, ಆಗ ಸುಮಾರು 46,800 ಮಹಿಳೆಯರನ್ನು ಗುರುತಿಸಲಾಗಿತ್ತು. ಆದರೆ ಅಂದಾಜು 20 ಸಾವಿರಕ್ಕೂ ಅಧಿಕ ಮಹಿಳೆಯರು ಗಣತಿಯಿಂದ ಹೊರಗುಳಿದಿದ್ದರು. 1982ರಲ್ಲಿ ಅಥವಾ ನಂತರ ದೇವದಾಸಿ ಮಹಿಳೆಯರಾಗಿದ್ದವರನ್ನೂ ಆ ಗಣತಿಯಲ್ಲಿ ಪರಿಗಣಿಸಿರಲಿಲ್ಲ ಎಂದು ಅವರು ಹೇಳಿದರು.
ಮಾಜಿ ದೇವದಾಸಿ ಮಹಿಳೆಯರಿಗೆ ಸಮರ್ಪಕ ವಸತಿ ಸೌಲಭ್ಯ ಕಲ್ಪಿಸಬೇಕು. ಪಿಂಚಣಿ ಮೊತ್ತವನ್ನು ತಿಂಗಳಿಗೆ ₹6,000ಕ್ಕೆ ಹೆಚ್ಚಿಸಬೇಕು. ಮಾಜಿ ದೇವದಾಸಿಯರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕೊಂದರಲ್ಲೇ ಸುಮಾರು 1,950 ಮಾಜಿ ದೇವದಾಸಿ ಮಹಿಳೆಯರು ಇದ್ದು, ಅವರ ಯೋಗಕ್ಷೇಮ ಹಾಗೂ ಕುಂದುಕೊರತೆಗಳನ್ನು ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ನಂತರ ತಾಲೂಕು ಉಪ ತಹಶೀಲ್ದಾರ್ ಕೆ. ಶಿವಕುಮಾರ್ ಗೌಡ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದೇವದಾಸಿ ವಿಮೋಚನಾ ಸಂಘದ ಕಾರ್ಯದರ್ಶಿ ಪಿ. ಚಾಂದ್, ತಾಲೂಕು ಸಮಿತಿ ಮುಖಂಡರಾದ ಸತ್ಯಮ್ಮ, ಕೆ. ಹನುಮಂತಮ್ಮ, ತಿಮ್ಮಕ್ಕ, ನೀಲಮ್ಮ, ದುರ್ಗಮ್ಮ, ಪದ್ಮಮ್ಮ, ಶಿವಗಂಗಮ್ಮ, ದೊಡ್ಡಬಸಮ್ಮ, ಎಂ. ಗಂಗಮ್ಮ, ಜಿ. ಪಾರ್ವತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸರ್ಕಾರ ನಡೆಸುತ್ತಿರುವ ಗಣತಿ ಕಾರ್ಯವನ್ನು ಯಾವುದೇ ಲೋಪವಿಲ್ಲದೆ ಸಮಗ್ರವಾಗಿ ಪೂರ್ಣಗೊಳಿಸಬೇಕು. ಗಣತಿಯಿಂದ ಹೊರಗುಳಿದಿರುವ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬ ಸದಸ್ಯರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು.”
— ಕೆ. ಅಂಜಿನಮ್ಮ, ಅಧ್ಯಕ್ಷೆ, ತಾಲೂಕು ದೇವದಾಸಿ ಮಹಿಳೆಯರ ವಿಮೋಚನಾ ಸಂಘ



