ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ನಲ್ಲಿ ದಿನದಿಂದ ದಿನಕ್ಕೆ ಒಳಬೇಗುದಿ ಹೆಚ್ಚಾಗುತ್ತಿದ್ದು, ಸಂಪುಟ ವಿಸ್ತರಣೆಯ ಬಳಿಕ ಅಸಮಾಧಾನ ತಾರಕಕ್ಕೇರಿದೆ. ಸರ್ಕಾರ ಯಾವಾಗ ಬೇಕಾದರೂ ಪತನಗೊಂಡು ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಭವಿಷ್ಯ ನುಡಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಪ್ರಮಾಣವಚನ ಸಮಾರಂಭಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ಕಾಂಗ್ರೆಸ್ನ ಒಳಜಗಳಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ನಲ್ಲಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಾಲ್ಕು ಬಣಗಳು ಸೃಷ್ಟಿಯಾಗಿದ್ದು, ಸರ್ಕಾರವೇ ಸಮ್ಮಿಶ್ರ ಸರ್ಕಾರದಂತೆ ಕಾಣುತ್ತಿದೆ ಎಂದು ಟೀಕಿಸಿದರು.
ಸಚಿವ ಸಂಪುಟದ ಪಟ್ಟಿಯಲ್ಲಿ ಪ್ರಕಟವಾಗಿದ್ದ ಇಬ್ಬರ ಹೆಸರನ್ನು ಕೈಬಿಟ್ಟು ಮತ್ತೊಬ್ಬರಿಗೆ ಅವಕಾಶ ನೀಡಲಾಗಿದೆ. ಈ ಬದಲಾವಣೆ ಯಾರ ಒತ್ತಡಕ್ಕೆ ನಡೆದಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಪ್ರಾತಿನಿಧ್ಯದ ಕುರಿತು ಕಾಂಗ್ರೆಸ್ ಮಾತು ಮತ್ತು ಕೃತ್ಯದಲ್ಲಿ ವ್ಯತ್ಯಾಸವಿದೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದ ಕಾಂಗ್ರೆಸ್, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಂಪುಟದಲ್ಲೂ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗಳನ್ನು ವ್ಯಂಗ್ಯವಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದವರಿಗೆ ಪಕ್ಷದ ಉನ್ನತ ಹುದ್ದೆ ನೀಡಲಾಗಿದೆ. ತಮ್ಮ ಜವಾಬ್ದಾರಿಯ ಅರಿವಿನಿಂದ ಮಾತನಾಡಬೇಕು ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ ಸಿ.ಸಿ. ಪಾಟೀಲ, ತಮ್ಮ ಇಲಾಖೆಯ ಕೆಲಸ ಬಿಟ್ಟು ಅನಗತ್ಯ ರಾಜಕಾರಣದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇಸ್ಪೀಟ್, ಮರಳು ಹಾಗೂ ಡ್ರಗ್ಸ್ ದಂಧೆ ಹೆಚ್ಚಾಗಿರುವುದನ್ನು ತಡೆಯುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಯಾವುದೇ ಇರಲಿ, ಗದಗ ಜಿಲ್ಲೆಗೆ ಒಬ್ಬ ಸಚಿವ ಇರಬೇಕು. ಸಚಿವರಿಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿಯಂತ್ರಣ ಕಡಿಮೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಉಷಾ ದಾಸರ, ಎಂ.ಎಂ. ಹಿರೇಮಠ, ಲಿಂಗಾರಾಜ ಪಾಟೀಲ, ಮಂಜುನಾಥ ಮುಳಗುಂದ, ಅನಿಲ ಅಬ್ಬಿಗೇರಿ ಹಾಗೂ ಗೂಳಪ್ಪ ಮುಷಿಗೇರಿ ಉಪಸ್ಥಿತರಿದ್ದರು.
“ಕಾಂಗ್ರೆಸ್ನಲ್ಲಿ ಅಸಮಾಧಾನದ ಹೊಗೆ ದಟ್ಟವಾಗಿದೆ. ಸರ್ಕಾರ ಯಾವಾಗ ಬೇಕಾದರೂ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.”
ಸಿ.ಸಿ. ಪಾಟೀಲ, ನರಗುಂದ ಶಾಸಕ



