ಬೆಂಗಳೂರು: ರಾಜ್ಯ ಸರ್ಕಾರ ಆಯೋಜಿಸಿರುವ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜನರ ತೆರಿಗೆ ಹಣದಲ್ಲಿ ಮೋಜು-ಮಸ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಈ ಸಮಾವೇಶ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವ ಸಾಧನೆಗಾಗಿ ಈ ಸಮಾವೇಶ ನಡೆಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರದ ವಿರುದ್ಧ ಸಾಮಾನ್ಯ ಜನರೇ ಹೆಚ್ಚು ಪ್ರಶ್ನೆ ಕೇಳುತ್ತಿದ್ದಾರೆ” ಎಂದು ಕಿಡಿಕಾರಿದರು.
ಸಾರಿಗೆ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಿಖಿಲ್, ನೌಕರರ ಬಾಕಿ ವೇತನ ಮತ್ತು ಅರಿಯರ್ಸ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಹೇಳಿದರು.
“ಸಂಧಾನ ಸಭೆ ನಡೆದರೂ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಶಕ್ತಿ ಯೋಜನೆಯಡಿ ಉಚಿತ ಬಸ್ ಸೇವೆ ಘೋಷಿಸಿದ ಸರ್ಕಾರ, ಈಗ ಸಾರಿಗೆ ಇಲಾಖೆ ಯಾವ ಸ್ಥಿತಿಗೆ ಬಂದಿದೆ ಎಂಬುದಕ್ಕೆ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗಳ ನಿರ್ವಹಣೆಯನ್ನೂ ಟೀಕಿಸಿದ ಅವರು, “ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹೊಸ ಬಸ್ ಖರೀದಿಸಿಲ್ಲ. ಬಸ್‌ಗಳಿಗೆ ಟಯರ್ ಬದಲಾಯಿಸುವ ಸ್ಥಿತಿಯೂ ಇಲ್ಲ. ಬಸ್ ನಿರ್ವಹಣೆಗೆ ಬೇಕಾದಷ್ಟು ಹಣ ಸರ್ಕಾರದ ಬಳಿ ಇಲ್ಲ” ಎಂದು ಆರೋಪಿಸಿದರು.
ಸಾರಿಗೆ ನೌಕರರಿಗೆ ಸಂಬಳ ಪಾವತಿ ವಿಚಾರದಲ್ಲೂ ಸರ್ಕಾರ ಸಮರ್ಪಕ ನಿರ್ಧಾರ ಕೈಗೊಂಡಿಲ್ಲ ಎಂದು ಟೀಕಿಸಿದ ಅವರು, “ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 4,500 ಇವಿ ಬಸ್‌ಗಳನ್ನು ಬೆಂಗಳೂರಿಗೆ ಒದಗಿಸದೇ ಹೋಗಿದ್ದರೆ ಪರಿಸ್ಥಿತಿ ಇನ್ನೂ ಹದಗೆಡುತ್ತಿತ್ತು” ಎಂದರು.
ಬೆಂಗಳೂರಿನ ಕಸ ಸಮಸ್ಯೆ ಕುರಿತು ಮಾತನಾಡಿದ ನಿಖಿಲ್, “ಒಮ್ಮೆ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುತ್ತಿದ್ದ ನಗರ ಇಂದು ಕಸದ ರಾಶಿಯಿಂದ ತುಂಬಿ ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದರು.



