ಬೆಂಗಳೂರು: 2022ರಲ್ಲಿ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಕಲಬುರಗಿಯ ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣದಲ್ಲಿ ದಾಖಲಾಗಿದ್ದ ಕೇಸ್‌ಗಳನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಈ ನಿರ್ಧಾರ ಇದೀಗ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಮನವಿ ಮೇರೆಗೆ ಪ್ರಕರಣ ಹಿಂಪಡೆಯಲು ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಕೆಲ ಮುಸ್ಲಿಂ ಯುವಕರು ಮತ್ತು ಮುಖಂಡರಿಗೆ ಕಾನೂನು ಸಂಕಷ್ಟದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.
2022ರ ಶಿವರಾತ್ರಿ ಸಂದರ್ಭದಲ್ಲಿ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗ ಪೂಜೆ ವೇಳೆ ಗಲಾಟೆ ಉಂಟಾಗಿತ್ತು. ಶಿವಲಿಂಗದ ಮೇಲೆ ಅಪವಿತ್ರ ಕೃತ್ಯ ಎಸಗಲಾಗಿದೆ ಎಂಬ ಆರೋಪದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಬಳಿಕ ಸ್ಥಳಕ್ಕೆ ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ, ದಾಳಿ ಹಾಗೂ ಮಾರಕಾಸ್ತ್ರ ಪ್ರದರ್ಶನ ನಡೆದಿತ್ತು ಎನ್ನಲಾಗಿತ್ತು. ಪ್ರಕರಣ ಸಂಬಂಧ ಹಲವು ಮುಸ್ಲಿಂ ಮುಖಂಡರು ಮತ್ತು ಯುವಕರ ವಿರುದ್ಧ ಒಟ್ಟು 13 ಪ್ರಕರಣಗಳು ದಾಖಲಾಗಿದ್ದವು.
ಈಗ ಆ ಪ್ರಕರಣಗಳನ್ನು ಸರ್ಕಾರ ಹಿಂಪಡೆದುಕೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ’ ಆರೋಪ ಮಾಡುತ್ತಿದ್ದು, ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.



