ಮೈಸೂರು: ಬಿಜೆಪಿ ವತಿಯಿಂದ ನ.26ರಿಂದ ಡಿ.6ರವರೆಗೆ ಸಂವಿಧಾನ ದಿನಾಚರಣೆ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಸ್ಮರಣೆ ಸಂಬಂಧ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ, ಮೈಸೂರು ಮಹಾನಗರ ಹಾಗೂ ಗ್ರಾಮಾಂತರ ಮೈಸೂರು ಜಿಲ್ಲೆ ವತಿಯಿಂದ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಕ್ಷದ ಅಧ್ಯಕ್ಷರ ಆದೇಶದಂತೆ ಇದು ನಡೆಯಲಿದೆ. ನ.26 ಅನ್ನು ಕಾನೂನು ದಿನ ಎಂದು ನೆರವೇರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಜೀ ಅವರು ಸಂವಿಧಾನಕ್ಕೆ ಗೌರವ ಕೊಡುವ ಮತ್ತು ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕಾರ್ಯ ಆಗಲು ಸಂವಿಧಾನ ದಿನಾಚರಣೆ ಸಂಬಂಧ ಆದೇಶ ಮಾಡಿದ್ದರು ಎಂದು ವಿವರಿಸಿದರು.
ಬಿಜೆಪಿ ಎಂದರೆ ಅದು ದಲಿತ ವಿರೋಧಿ, ಡಾ. ಅಂಬೇಡ್ಕರರ ವಿರೋಧಿ; ಸಂವಿಧಾನ ವಿರೋಧಿ, ಮೀಸಲಾತಿ ರದ್ದು ಮಾಡುತ್ತಾರೆಂದು ವಿಪಕ್ಷಗಳು ಆಪಾದಿಸುತ್ತಿದ್ದವು. ಕಾಂಗ್ರೆಸ್ ಪಕ್ಷ ಹೆಚ್ಚಾಗಿ ಇದನ್ನು ಮಾಡಿದೆ ಎಂದು ಆಕ್ಷೇಪಿಸಿದರು. ಆದರೆ, ಸಂವಿಧಾನದ ಹೆಸರು ಹೇಳಿ ಸಂವಿಧಾನಕ್ಕೆ ದೋಖಾ ಮಾಡಿದ್ದು ಅದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಹೆಸರು ಹೇಳುತ್ತ ಅವರಿಗೆ ಮೋಸ ಮಾಡಿದ್ದು ಅದೇ ಕಾಂಗ್ರೆಸ್ ಪಕ್ಷ ಎಂದು ನೆನಪಿಸಿದರು. ಮೀಸಲಾತಿ ಬಗ್ಗೆ ಮಾತನಾಡುತ್ತಲೇ ಮೀಸಲಾತಿಯಿಂದ ಈ ದೇಶ ಉದ್ಧಾರ ಆಗುವುದಿಲ್ಲ ಎಂದು ನೆಹರೂ ಅವರು ಹೇಳಿದ್ದರು. ಅದೂ ಅದೇ ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ಈಗ ಸಂವಿಧಾನ ರಕ್ಷಣೆ ಎಂದು ಹೊರಟಿದ್ದಾರೆ ಎಂದು ದೂರಿದರು.



