ಅಮರಾವತಿ: ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ದುರಂತವೊಂದು ಸಂಭವಿಸಿದ್ದು, ಮೂರು ವರ್ಷದ ಮಗುವನ್ನು ಬಿಟ್ಟು ದಂಪತಿ ಸೇತುವೆ ಮೇಲಿಂದ ನದಿಗೆ ಹಾರಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೆಲ್ಪುರು ಗ್ರಾಮದ ನಿವಾಸಿಗಳಾದ ಪತಿ ದೊಡ್ಡ ಸಾಯಿ (29) ಮತ್ತು ಪತ್ನಿ ಶಿರೀಷಾ (28) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದರು. ಬಳಿಕ ಮಗುವನ್ನು ಸ್ಕೂಟರ್ ಮೇಲೆಯೇ ಬಿಟ್ಟು ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಕತ್ತಲು ಹಾಗೂ ಚಳಿ ಮಧ್ಯೆ ಮಗು ಒಂಟಿಯಾಗಿ ಸೇತುವೆ ಮೇಲೆ ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು ಅಮ್ಮ-ಅಪ್ಪ ಎಂದು ಕರೆಯುತ್ತಿರುವುದನ್ನು ಕೇಳಿ ಸ್ಥಳೀಯರು ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ವಶಕ್ಕೆ ತೆಗೆದುಕೊಂಡು ಸ್ಕೂಟರ್ ಜಪ್ತಿ ಮಾಡಿದ್ದಾರೆ. ಬಳಿಕ ಮಗುವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ. ಸದ್ಯ ದಂಪತಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸ್ ಸಿಬ್ಬಂದಿ, ಈಜುಗಾರರು ಮತ್ತು ದೋಣಿ ತಂಡಗಳು ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ತಂದೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಆಂಧ್ರಪ್ರದೇಶಕ್ಕೆ ಹಿಂತಿರುಗುವ ಮೊದಲು ಗಲ್ಫ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ಸಾಲದ ಹೊರೆ ಹಾಗೂ ಹಣಕಾಸಿನ ಒತ್ತಡದಿಂದ ಬಳಲುತ್ತಿದ್ದ ದಂಪತಿ, ಆರ್ಥಿಕ ಸಮಸ್ಯೆಯ ಕಾರಣದಿಂದಲೇ ತಮ್ಮ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಸದ್ಯ ಘಟನೆಗೆ ನಿಖರವಾದ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



