ಬಳ್ಳಾರಿ: ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದಲ್ಲಿ ತಡರಾತ್ರಿ ಅನಿಲ ಸಿಲಿಂಡರ್ ಸ್ಫೋಟದಿಂದ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಈರಣ್ಣ ಅವರಿಗೆ ಸೇರಿದ ಹೋಟೆಲ್‌ನಲ್ಲಿ ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಎರಡು ಅನಿಲ ಸಿಲಿಂಡರ್‌ಗಳು ಏಕಾಏಕಿ ಸ್ಫೋಟಗೊಂಡ ಪರಿಣಾಮ ಹೋಟೆಲ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಘಟನೆಯ ವೇಳೆ ಹೋಟೆಲ್‌ನಲ್ಲಿ ಈರಣ್ಣನ ಕುಟುಂಬದ 9 ಮಂದಿ ಮಲಗಿದ್ದರೆಂದು ತಿಳಿದುಬಂದಿದ್ದು, ಅದೃಷ್ಟವಶಾತ್ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ 10 ವರ್ಷದ ಬಾಲಕ ಶ್ರೀನಿವಾಸ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನಿಗೆ ಬೆನ್ನು, ಕೈ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ತಕ್ಷಣ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ನಿ ಅವಘಡದ ತೀವ್ರತೆಗೆ ಹೋಟೆಲ್‌ನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದು, ಹೋಟೆಲ್ ಮಾಲೀಕರ ಜೀವನೋಪಾಯಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೆ ಸಹ ವ್ಯಾಪಿಸಿ, ಎರಡು–ಮೂರು ಅಂಗಡಿಗಳೊಂದಿಗೆ ಟೈಯರ್ ಅಂಗಡಿಯೂ ಹೊತ್ತಿ ಉರಿದಿದೆ.
ಘಟನೆ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.



