ಬೆಂಗಳೂರು: ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಳ್ಳಲಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ಸುದ್ದಿಗೋಷ್ಠಿ ಬಳಿಕ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣಗಳಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಹೈಕೋರ್ಟ್ ಆದೇಶದ ಹಿನ್ನೆಲೆ ಈ ಬಾರಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ಬದಲಾಗಿ ಅಂಕ ನೀಡಲಾಗಿದೆ. ಇದರ ಪರಿಣಾಮವಾಗಿ 525 ಅಂಕಗಳ ಬದಲಿಗೆ 625 ಅಂಕಗಳಿಗೆ ಫಲಿತಾಂಶ ಪ್ರಕಟಿಸಲಾಗುತ್ತಿದೆ.
ಈ ವರ್ಷ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯಾದ್ಯಂತ 2,871 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಈ ಬಾರಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿ ಡಿಜಿಟಲ್ ರೂಪದಲ್ಲಿಯೂ ಲಭ್ಯವಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಡಿಜಿಲಾಕರ್ ಜಾಲತಾಣ ಹಾಗೂ ಇತರೆ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹಾಗೇ ಕರ್ನಾಟಕ ಒನ್ ಮೊಬೈಲ್ ಅನ್ವಯಿಕದಲ್ಲೂ ಫಲಿತಾಂಶ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆಗೆ ಇಂದು ತೆರೆ ಬೀಳಲಿದೆ.



