ಬೆಂಗಳೂರು: ರಾಜ್ಯದಲ್ಲಿ ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮೊದಲ ಕಂತಿನಲ್ಲಿ ಬಿಡುಗಡೆಯಾದ ಹಣವೇ ಅಂತಿಮ ಪರಿಹಾರವಲ್ಲ. ರಾಜ್ಯದ ಪ್ರತಿಯೊಬ್ಬ ಅರ್ಹ ರೈತನಿಗೂ ಕನಿಷ್ಠ 5 ಸಾವಿರ ರೂಪಾಯಿ ಬರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬರ ಪರಿಹಾರದ ಮೊತ್ತದ ಕುರಿತು ಸ್ಪಷ್ಟನೆ ನೀಡಿರುವ ಅವರು, ಶೀಘ್ರದಲ್ಲೇ ಹೆಚ್ಚುವರಿಯಾಗಿ ಮತ್ತೊಂದು 3 ಸಾವಿರ ರೂಪಾಯಿ ಪಾವತಿಯಾಗಲಿದೆ. ಮೊದಲ ಕಂತಿನಲ್ಲಿ ಬಾಕಿ ಉಳಿದಿರುವ 2,500 ರೂಪಾಯಿ ಹಣವನ್ನೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೇವಲ ಅರ್ಧ ಎಕರೆ ಜಮೀನು ಹೊಂದಿರುವ ಸಣ್ಣ ಹಿಡುವಳಿದಾರ ರೈತರಿಗೂ ಕನಿಷ್ಠ 5 ಸಾವಿರ ರೂಪಾಯಿ ಪರಿಹಾರ ಸಿಗಲಿದೆ. ಜಮೀನಿನ ವಿಸ್ತೀರ್ಣವೊಂದನ್ನೇ ಪರಿಹಾರ ನಿರ್ಧರಿಸುವ ಮಾನದಂಡವಾಗಿ ಪರಿಗಣಿಸುವುದಿಲ್ಲ. ಬೆಳೆ ನಷ್ಟದ ಪ್ರಮಾಣವನ್ನು ಆಧರಿಸಿ ರೈತರಿಗೆ ಕನಿಷ್ಠ 5 ಸಾವಿರದಿಂದ ಗರಿಷ್ಠ 60 ಸಾವಿರ ರೂಪಾಯಿವರೆಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರದ ಮಾರ್ಗಸೂಚಿ ಮೀರಿ ಹೆಚ್ಚುವರಿ ನೆರವು:
ಕೇಂದ್ರ ಸರ್ಕಾರದ SDRF ಮತ್ತು NDRF ಮಾರ್ಗಸೂಚಿಗಳಿಗಿಂತ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ತನ್ನ ಸ್ವಂತ ನಿಧಿಯಿಂದಲೂ ರೈತರಿಗೆ ಪರಿಹಾರ ನೀಡಲು ತೀರ್ಮಾನಿಸಿದೆ. ಅರ್ಹ ರೈತರಿಗೆ ಪರಿಹಾರ ತಲುಪುವಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಕಿ ಇರುವ ಹಣವನ್ನು ತ್ವರಿತವಾಗಿ ರೈತರ ಖಾತೆಗಳಿಗೆ ಜಮಾ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ರೈತರ ಸಂಕಷ್ಟವನ್ನು ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಸಾರ್ವಜನಿಕರು ಮತ್ತು ರೈತರು ಯಾವುದೇ ತಪ್ಪು ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡಬಾರದು. ಪರಿಹಾರ ವಿತರಣೆಯಲ್ಲಿ ಲೋಪಗಳಿದ್ದರೆ ಅವುಗಳನ್ನು ತಕ್ಷಣ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.








