ಬೆಂಗಳೂರು: ಪತ್ನಿಗೆ ನೀಡಬೇಕಾದ ಜೀವನಾಂಶವನ್ನು ಪಾವತಿಸದೇ ಅನಗತ್ಯ ವಿಳಂಬ ಮಾಡುತ್ತಿದ್ದ ಪತಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್ ಅನ್ನು ಸಮರ್ಥಿಸಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಜೀವನಾಂಶ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್ ಪ್ರಶ್ನಿಸಿ ಸೈಲೇಶ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಡಾ. ಕೆ. ಮನ್ಮಧ ರಾವ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದು ಉದ್ದೇಶಪೂರ್ವಕ ಅವಿಧೇಯತೆ ಎಂದು ಪೀಠ ಕಟುವಾಗಿ ಅಭಿಪ್ರಾಯಪಟ್ಟಿದೆ.
ಜೀವನಾಂಶ ಎನ್ನುವುದು ಕೇವಲ ಘೋಷಣಾತ್ಮಕ ಆದೇಶವಲ್ಲ; ಅದನ್ನು ಪಾವತಿಸುವುದು ಸಂಬಂಧಿತ ವ್ಯಕ್ತಿಯ ನಿರಂತರ ಕಾನೂನುಬದ್ಧ ಹೊಣೆಗಾರಿಕೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ವಿಚಾರಣೆ ಬಾಕಿಯಿದೆ ಅಥವಾ ಮಧ್ಯಂತರ ಆದೇಶಗಳಿವೆ ಎಂಬ ನೆಪದಲ್ಲಿ ಜೀವನಾಂಶ ಪಾವತಿಯನ್ನು ಮುಂದೂಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 125(3) ಅಡಿಯಲ್ಲಿ ಬಂಧನ ವಾರಂಟ್ ಜಾರಿಗೆ ಸ್ಪಷ್ಟ ಅವಕಾಶವಿದ್ದು, ಅರ್ಜಿದಾರರಿಗೆ ಸಮರ್ಪಕ ಕಾಲಾವಕಾಶ ನೀಡಿದ್ದರೂ ಜೀವನಾಂಶ ಪಾವತಿಸದಿರುವುದಕ್ಕೆ ಸೂಕ್ತ ಕಾರಣ ನೀಡಲು ಅವರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.
ಇದಲ್ಲದೆ, ಬಂಧನಕ್ಕೂ ಮುನ್ನ ಆಸ್ತಿ ಜಪ್ತಿ ಮಾಡಲೇಬೇಕೆಂಬ ಕಡ್ಡಾಯ ನಿಯಮವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಜೀವನಾಂಶ ಪಾವತಿಸದ ಸಂದರ್ಭಗಳಲ್ಲಿ ದಂಡ ವಿಧಿಸುವುದು ಅಥವಾ ಜೈಲು ಶಿಕ್ಷೆ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಸ್ಪಷ್ಟಪಡಿಸಿದೆ.
ಜೀವನಾಂಶ ಕಾನೂನಿನ ಮೂಲ ಉದ್ದೇಶ ಅಸಹಾಯಕ ಪತ್ನಿ ಮತ್ತು ಮಕ್ಕಳಿಗೆ ಆರ್ಥಿಕ ಭದ್ರತೆ ಒದಗಿಸುವುದಾಗಿದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸುವವರಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ಮಂಗಳೂರಿನ ಕೌಟುಂಬಿಕ ನ್ಯಾಯಾಲಯ ಕಾನೂನು ಪ್ರಕಾರ ಬಂಧನ ಮತ್ತು ಹಣ ವಸೂಲಾತಿ ಕ್ರಮಗಳನ್ನು ಮುಂದುವರಿಸಬಹುದು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಮಂಗಳೂರು ಮೂಲದ ಸೈಲೇಶ್ ಕುಮಾರ್ ಮತ್ತು ನಿಶಾ ಎಸ್. ಕುಮಾರ್ ಅವರು 1998ರ ಮಾರ್ಚ್ 18ರಂದು ವಿವಾಹವಾಗಿದ್ದು, ದಂಪತಿಗೆ ಯಶ್ ಎಂಬ ಪುತ್ರನಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ನಿಶಾ ಅವರು 2014ರಲ್ಲಿ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಮೊದಲಿಗೆ ಮಾಸಿಕ 12,750 ರೂ. ಪಾವತಿಸಲು ಆದೇಶಿಸಿತ್ತು. ನಂತರ ಸುದೀರ್ಘ ವಿಚಾರಣೆ ಬಳಿಕ ಪತ್ನಿ ಹಾಗೂ ಮಗನಿಗೆ ವಿವಿಧ ಅವಧಿಗಳಿಗೆ ಅನ್ವಯವಾಗುವಂತೆ ಮಾಸಿಕ 1.80 ಲಕ್ಷದಿಂದ 2.80 ಲಕ್ಷ ರೂ.ವರೆಗೆ ಜೀವನಾಂಶ ಪಾವತಿಸಲು ಹಾಗೂ ಬಾಕಿ ಮೊತ್ತಕ್ಕೆ ಶೇ.7.5ರಷ್ಟು ಬಡ್ಡಿಯೊಂದಿಗೆ ಪಾವತಿಸಲು ನಿರ್ದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಸೈಲೇಶ್ ಕುಮಾರ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣಾ ಹಂತದಲ್ಲಿದೆ. ಇದೇ ವೇಳೆ ಪತ್ನಿ ನ್ಯಾಯಾಲಯದ ಆದೇಶ ಜಾರಿಗೊಳಿಸಲು ಎಕ್ಸಿಕ್ಯೂಷನ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯ ಸೂಚಿಸಿದಂತೆ ಪರಿಹಾರದ ಶೇ.50ರಷ್ಟು ಮೊತ್ತ ಠೇವಣಿ ಇಡದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಬಂಧನಕ್ಕೊಳಗಾದ ಸೈಲೇಶ್ ಕುಮಾರ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸೈಲೇಶ್ ಕುಮಾರ್ ಅವರ ಮಾಸಿಕ ಆದಾಯ ಕೇವಲ 42 ಸಾವಿರ ರೂ. ಆಗಿದ್ದು, ಕೋಟ್ಯಂತರ ರೂಪಾಯಿ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ. ಬಂಧನ ವಾರಂಟ್ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.



