ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿದೆ. ಜಾಮೀನು ಮಂಜೂರಾದರೂ ಶ್ಯೂರಿಟಿ ಕೊರತೆಯಿಂದಾಗಿ ಶಿವಮೊಗ್ಗ ಜೈಲಿನಲ್ಲಿ 23 ದಿನಗಳ ಕಾಲ ಅವರು ಬಂಧನದಲ್ಲೇ ಉಳಿದಿದ್ದರು.
ಜೈಲಿನಲ್ಲಿ ಇದ್ದ ಅವಧಿಯಲ್ಲಿ ಚಿನ್ನಯ್ಯ ಹೆಚ್ಚು ಮಾತನಾಡದೆ ಮೌನಕ್ಕೆ ಶರಣಾಗಿದ್ದು, ಸಹ ಕೈದಿಗಳೊಂದಿಗೆ ಕೂಡ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಇದೀಗ ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚಿನ್ನಯ್ಯನ ಬಿಡುಗಡೆಗೆ ನ್ಯಾಯಾಲಯ ಅನುಮತಿ ನೀಡಿದೆ.
ಡಿಸೆಂಬರ್ 17ರಂದು ಚಿನ್ನಯ್ಯನ ಪತ್ನಿ ಮಲ್ಲಿಕಾ ಒಂದು ಲಕ್ಷ ರೂಪಾಯಿ ಬಾಂಡ್ ಸಲ್ಲಿಸಿದ್ದು, ಜೊತೆಗೆ ಇಬ್ಬರು ಜಾಮೀನುದಾರರು ಮತ್ತು ಒಬ್ಬರ ಶ್ಯೂರಿಟಿಯನ್ನೂ ಕೋರ್ಟ್‌ಗೆ ಒದಗಿಸಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಾಲಯ ಅದೇ ದಿನ ಚಿನ್ನಯ್ಯನ ಬಿಡುಗಡೆಗೆ ಆದೇಶ ಹೊರಡಿಸಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನನ್ನು ಬಳಸಿಕೊಂಡು ಬುರುಡೆ ಗ್ಯಾಂಗ್ ದೂರು ನೀಡಿತ್ತು. ಆದರೆ ಯಾವಾಗ ಬುರುಡೆ ಗ್ಯಾಂಗ್ ವಿರುದ್ಧವೇ ಚಿನ್ನಯ್ಯ ತಿರುಗಿ ಬಿದ್ದನೋ ಅಲ್ಲಿಂದ ಗ್ಯಾಂಗ್ ಸದಸ್ಯರು ಚಿನ್ನಯ್ಯನ ವಿರುದ್ಧವೇ ಮಾತನಾಡುತ್ತಿದ್ದಾರೆ.
ವಿಶೇಷ ತನಿಖಾ ತಂಡ ತನಿಖಾ ವರದಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಅದರ ಬೆನ್ನಲ್ಲೇ ಚಿನ್ನಯ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯ 1 ಲಕ್ಷ ರೂ. ಬಾಂಡ್ ಸೇರಿ 12 ಷರತ್ತುಗಳನ್ನು ವಿಧಿಸಿ ನ.25ರಂದು ಜಾಮೀನು ಮಂಜೂರು ಮಾಡಿತ್ತು.



