ಬಾಲಿವುಡ್ ವಲಯದಲ್ಲಿ ಸಂಚಲನ ಮೂಡಿಸಿದ್ದ ‘ಧುರಂಧರ್’ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೊಹ್ರೆ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಆಂತರಿಕ ಪಿಒಎಸ್‌ಎಚ್ ಸಮಿತಿ ನಡೆಸಿದ ತನಿಖೆಯಲ್ಲಿ ಆರೋಪಗಳು ಸಾಬೀತಾಗಿರುವುದರಿಂದ ಚಿತ್ರರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರಂಭವಾದ ತನಿಖೆ ಸುಮಾರು ಆರು ತಿಂಗಳ ಕಾಲ ಮುಂದುವರಿದಿತ್ತು. ಪ್ರಕರಣದ ಪ್ರತಿಯೊಂದು ಅಂಶವನ್ನು ಪರಿಶೀಲಿಸಿದ ಸಮಿತಿ, 2026ರ ಮಾರ್ಚ್ ಅಂತ್ಯದಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಸೈನಿ ಎಸ್. ಜೊಹ್ರೆ ವಿರುದ್ಧದ ಆರೋಪಗಳಿಗೆ ಬಲವಾದ ಆಧಾರಗಳಿವೆ ಎಂದು ಅಭಿಪ್ರಾಯಪಟ್ಟಿದೆ.
ಲೈಂಗಿಕ ದೌರ್ಜನ್ಯ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ ಸೇರಿದಂತೆ ಎರಡು ಪ್ರಮುಖ ಆರೋಪಗಳಲ್ಲಿ ಅವರನ್ನು ಹೊಣೆಗಾರರೆಂದು ಸಮಿತಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ಯಶ್ ರಾಜ್ ಫಿಲ್ಮ್ಸ್ ತನ್ನ ಮುಂದಿನ ಸಿನಿಮಾದ ಕ್ರೆಡಿಟ್ ಹಾಗೂ ಯೋಜನೆಗಳಿಂದ ಅವರ ಹೆಸರನ್ನು ಕೈಬಿಟ್ಟಿದೆ ಎನ್ನಲಾಗಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ಚಂಡೀಗಢದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಘಟನೆಯಲ್ಲಿ ಪಾನೀಯದಲ್ಲಿ ಮಾದಕ ವಸ್ತು ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿ ಕಿರುಕುಳ ನೀಡಲಾಗಿತ್ತು. ಬಳಿಕ ಹಲ್ಲೆ ನಡೆಸಿ ಕೊಠಡಿಯಿಂದ ಹೊರಬರದಂತೆ ತಡೆಹಿಡಿಯಲಾಗಿದೆ ಎಂಬ ಗಂಭೀರ ಆರೋಪಗಳನ್ನು ಅವರು ಮಾಡಿದ್ದರು.
ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ನ್ಯಾಯಾಲಯ ಜಾಮೀನು ನೀಡಿದ್ದರೂ, ಇದೀಗ ಆಂತರಿಕ ಸಮಿತಿಯ ವರದಿ ಹೊರಬಿದ್ದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರರಂಗದಲ್ಲಿ ಸುರಕ್ಷಿತ ಕಾರ್ಯಕ್ಷೇತ್ರದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣ, ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಹೊಸ ಹಂತಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.



