ಬೆಂಗಳೂರು: ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗಳ ನಿರ್ವಹಣೆಗೆ ಹೊಸ ಅಧ್ಯಾಯ ಆರಂಭವಾಗಿದ್ದು, ಆರೋಗ್ಯ ಇಲಾಖೆ ಅತ್ಯಾಧುನಿಕ ‘ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್’ (HEOC) ಅನ್ನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರಂಭಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದ್ದು, ಆರೋಗ್ಯ, ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸೇವೆಗಳನ್ನು ಒಂದೇ ವೇದಿಕೆಗೆ ತರಲಾಗಿದೆ.
WHO ಮಾರ್ಗಸೂಚಿ ಮತ್ತು ‘ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್’ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕೇಂದ್ರವು 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಾಂಕ್ರಾಮಿಕ ರೋಗ ಹರಡುವಿಕೆ, ಪ್ರಕೃತಿ ವಿಕೋಪ, ಅಗ್ನಿ ಅವಘಡ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳೊಂದಿಗೆ ನೇರ ಸಂಪರ್ಕ ಸಾಧಿಸಿ ಕ್ಷಿಪ್ರ ನಿರ್ಧಾರ ಕೈಗೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ.
ಇದರಿಂದ ಸಾರ್ವಜನಿಕರು ಬೇರೆ ಬೇರೆ ಸಹಾಯವಾಣಿಗಳಿಗೆ ಕರೆ ಮಾಡುವ ಅವಶ್ಯಕತೆ ಕಡಿಮೆಯಾಗಲಿದ್ದು, ಒಂದೇ ಕೇಂದ್ರದ ಮೂಲಕ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ. ಆಂಬ್ಯುಲೆನ್ಸ್ ಸೇವೆಗಳನ್ನೂ HEOC ಜಾಲಕ್ಕೆ ಸಂಪರ್ಕಿಸಲಾಗಿದ್ದು, ರಿಯಲ್ ಟೈಂ ಮಾಹಿತಿ ವಿನಿಮಯ ಸಾಧ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಅವಧಿಯಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಶ್ವ ಮಟ್ಟದ ಮಾದರಿಯ ವ್ಯವಸ್ಥೆ ರಾಜ್ಯದಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ವಿವಿಧ ಇಲಾಖೆಗಳ ಸಮನ್ವಯದ ಮೂಲಕ ಜನರಿಗೆ ವೇಗವಾದ ಸೇವೆ ಒದಗಿಸುವುದು ಕೇಂದ್ರದ ಪ್ರಮುಖ ಉದ್ದೇಶ ಎಂದು ಸಚಿವರು ಹೇಳಿದ್ದಾರೆ.



