ವಿಜಯಸಾಕ್ಷಿ ಸುದ್ದಿ, ಗದಗ: ರೈತರ ಬೆಳೆ ಸಾಲ, ಕಿರು ವ್ಯಾಪಾರ ಸಾಲ ಸೇರಿದಂತೆ ವಿವಿಧ ಯೋಜನೆಗಳಡಿ ನೀಡಿದ ಸಾಲಗಳ ಮರುಪಾವತಿಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಬಳಗಾನೂರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗ್ರಾಹಕರು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರ ಜೊತೆಗೆ, ಶಾಖಾ ವ್ಯವಸ್ಥಾಪಕ ಅಶೋಕ ಬಾರಕೇರ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆ, ಸಮಯಪಾಲನೆ ಮತ್ತು ಗ್ರಾಹಕ ಸ್ನೇಹಿ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್. ಕಲ್ಮನಿ ಮಾತನಾಡಿ, “ಗ್ರಾಮೀಣ ಭಾಗದ ಜನರಿಗೆ ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಬಳಗಾನೂರು ಶಾಖೆ ಜಿಲ್ಲೆಯಲ್ಲೇ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶೇಖರಯ್ಯ ನನ್ನಯ್ಯನಮಠ, ಪ್ರೊ. ವಿ.ಬಿ. ಕರಮುಡಿ, ಎಂ.ಎ. ಪಾಟೀಲ, ಸಂಗಪ್ಪ ಗೂಳರಡ್ಡಿ, ಅರ್ಜುನ್ ಸಾಲಿ, ನಿಂಗಪ್ಪ ಮಡಿವಾಳರ, ರಾಜು ಪಡೇಸೂರ, ಶರಣಪ್ಪ ಹೊಂಬಳ ಸೇರಿದಂತೆ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ಸಿದ್ದಪ್ಪ ವಗ್ಗನವರ ಸ್ವಾಗತಿಸಿದರು. ಎಂ.ಆರ್. ಪಡೇಸೂರ ವಂದಿಸಿದರು.



