ಮಂಗಳೂರು: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಡಿಕೆ ಶಿವಕುಮಾರ್ ಅವರು ಶತಮಾನಗಳಷ್ಟು ಪುರಾತನವಾದ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಾರ್ಥನೆ ಸಲ್ಲಿಸಿ ದೇವರ ದರ್ಶನ ಪಡೆದ ಅವರು, ನಾಡಿನ ಸಮಸ್ತ ಜನರ ಒಳಿತಿಗಾಗಿ, ಉತ್ತಮ ಮಳೆ-ಬೆಳೆ ಹಾಗೂ ರಾಜ್ಯದ ಸಮೃದ್ಧಿಗಾಗಿ ದೇವರಲ್ಲಿ ಬೇಡಿಕೊಂಡಿದ್ದಾರೆ.
ಕದ್ರಿ ಶ್ರೀ ಮಂಜುನಾಥನ ದರ್ಶನ, ವಿಶೇಷ ಪೂಜೆ: ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಮೊದಲು ಕದ್ರಿ ದೇವಸ್ಥಾನದ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದುರ್ಗಾಪರಮೇಶ್ವರಿ ಅಮ್ಮನವರ ಗುಡಿಯಲ್ಲೂ ಪೂಜೆ ಸಲ್ಲಿಸಿ, ನಂತರ ಕದ್ರಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಸಚಿವ ಸಂಪುಟ ಸಭೆಯು ನಿರ್ವಿಘ್ನವಾಗಿ ಹಾಗೂ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿದರು. ಈ ಕುರಿತ ಫೋಟೋಗಳನ್ನು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ‘ಎಕ್ಸ್’ (ಟ್ವಿಟರ್) ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ತಣ್ಣೀರುಬಾವಿ ಬೀಚ್‌ನಲ್ಲಿ ಔತಣಕೂಟ, ಕಂಬಳ-ದೈವಾರಾಧನೆ ಪರಿಕರ ವೀಕ್ಷಣೆ: ಕದ್ರಿ ದೇವಸ್ಥಾನದ ಸನ್ನಿಧಾನಕ್ಕೆ ಭೇಟಿ ನೀಡುವ ಮುನ್ನ ಡಿಕೆ ಶಿವಕುಮಾರ್ ಅವರು ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು.
ಈ ವೇಳೆ ತುಳುನಾಡಿನ ಸಾಂಸ್ಕೃತಿಕ ಹೆಮ್ಮೆಯಾದ ದೈವಾರಾಧನೆ ಹಾಗೂ ಕಂಬಳದ ಪಾರಂಪರಿಕ ಪರಿಕರಗಳ ಪ್ರದರ್ಶನವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಕೊಂಬು ಊದಿ, ದೈವದ ಗಗ್ಗರವನ್ನು ಕೈಯಲ್ಲಿ ಹಿಡಿದು ಅದರ ನಾದಕ್ಕೆ ಮನಸೋತರು. ಜೊತೆಗೆ ಕಂಬಳದ ನೇಗಿಲು ಹಾಗೂ ಇತರ ಪ್ರಾಚೀನ ವಸ್ತುಗಳನ್ನು ವೀಕ್ಷಿಸುತ್ತಾ, ಸಮುದ್ರದ ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಾ ಔತಣ ಸವಿದರು.



