HomeKarnataka Newsದೋಸೆ ಮಾಡಿ, ರಾಗಿ ಮುದ್ದೆ ತಯಾರಿಸಿ’ ಎಂದರೆ ಅದು ಕೌಟುಂಬಿಕ ದೌರ್ಜನ್ಯವಾಗುತ್ತದೆಯೇ? ಹೈಕೋರ್ಟ್ ಪ್ರಶ್ನೆ

ದೋಸೆ ಮಾಡಿ, ರಾಗಿ ಮುದ್ದೆ ತಯಾರಿಸಿ’ ಎಂದರೆ ಅದು ಕೌಟುಂಬಿಕ ದೌರ್ಜನ್ಯವಾಗುತ್ತದೆಯೇ? ಹೈಕೋರ್ಟ್ ಪ್ರಶ್ನೆ

For Dai;y Updates Join Our whatsapp Group

ಬೆಂಗಳೂರು: ದೋಸೆ ಮತ್ತು ರಾಗಿ ಮುದ್ದೆ ಮಾಡುವಂತೆ ಅತ್ತೆ ಹೇಳುವುದು ಹಾಗೂ ತಲೆಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯಕ್ಕೆ ಸೇರುತ್ತದೆಯೇ ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿದೆ.

ಸೊಸೆ ನೀಡಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅತ್ತೆ ಹಾಗೂ ಆಕೆಯ ಸಂಬಂಧಿಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠ, ಪತಿಯು ಊಟ ಮಾಡಿದ ಬಳಿಕವೇ ತಮಗೆ ಊಟ ಮಾಡಲು ಅವಕಾಶ ನೀಡಲಾಗುತ್ತಿತ್ತು, ಪತಿಗೆ ಬಿಸಿ ದೋಸೆ ಹಾಗೂ ರಾಗಿ ಮುದ್ದೆ ಮಾಡಿಕೊಡುವಂತೆ ಅತ್ತೆ ಹೇಳುತ್ತಿದ್ದರು ಎಂಬ ಆರೋಪಗಳನ್ನು ಉಲ್ಲೇಖಿಸಿ, ಇಂತಹ ಆರೋಪಗಳಿಗೆ ಐಪಿಸಿ ಸೆಕ್ಷನ್‌ 498ಎ ಅನ್ವಯವಾಗುತ್ತದೆಯೇ ಎಂದು ಪ್ರಶ್ನಿಸಿತು.

ಕುಟುಂಬದಲ್ಲಿ ಸಾಮಾನ್ಯವಾಗಿ ನಡೆಯುವ ಜಗಳಗಳನ್ನು ಕಾನೂನಿನ ಅಡಿ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪತಿಗೆ ದೋಸೆ ಅಥವಾ ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ತಲೆಕೂದಲು ಉದುರುವುದು ಅಥವಾ ಪೌಷ್ಟಿಕ ಆಹಾರ ನೀಡಿಲ್ಲ ಎಂಬ ಆರೋಪಗಳನ್ನು ವರದಕ್ಷಿಣೆ ಕಿರುಕುಳ ಎಂದು ಕರೆಯಲು ಸಾಧ್ಯವಿಲ್ಲ.

ಇಂತಹ ವಿಚಾರಗಳನ್ನು ವಿಚ್ಛೇದನ ಅರ್ಜಿಯ ವಿಚಾರಣೆಯಲ್ಲಿ ಪ್ರಸ್ತಾಪಿಸಬಹುದು. ಆದರೆ ಪ್ರತಿಯೊಂದು ಅಹವಾಲನ್ನೂ ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಪ್ರತಿವಾದಿಯಾಗಿರುವ ಪತ್ನಿ ಸ್ವತಃ ನ್ಯಾಯಾಲಯದಲ್ಲಿ ಹಾಜರಾಗಿ, ಪತಿಯ ಮನೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ವಾದಿಸಿದರು. ತಮಗೆ ಪೌಷ್ಟಿಕ ಆಹಾರ ನೀಡುತ್ತಿರಲಿಲ್ಲ. ಪ್ರತಿದಿನ ದೋಸೆ, ಅನ್ನ, ಸೊಪ್ಪು ಹಾಗೂ ಬೇಳೆಸಾರು ಮಾತ್ರ ನೀಡುತ್ತಿದ್ದರು. ಮನೆಯ ಇತರರು ಮಾತ್ರ ಉತ್ತಮ ಆಹಾರ ಸೇವಿಸುತ್ತಿದ್ದರು ಎಂದು ಆರೋಪಿಸಿದರು.

ನಿರಂತರ ಕಿರುಕುಳದಿಂದ ತಲೆಕೂದಲು ಉದುರಲು ಆರಂಭವಾಯಿತು. ಅತ್ತೆ ಅಡುಗೆಮನೆಗೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ತಾನು ಸಂಪಾದಿಸಿದ ಸಂಬಳವನ್ನೆಲ್ಲ ಪತಿಗೆ ನೀಡುತ್ತಿದ್ದ ಕಾರಣ ವೈಯಕ್ತಿಕ ಖರ್ಚಿಗೆ ಹಣ ಉಳಿಯುತ್ತಿರಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, ಪತಿಯನ್ನು ತನ್ನ ತಾಯಿಯ ಕೊಠಡಿಯಲ್ಲೇ ಮಲಗುವಂತೆ ಮಾಡಲಾಗುತ್ತಿತ್ತು. ತಾನು ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದೆ. ಸುಮಾರು ಐದೂವರೆ ತಿಂಗಳು ಈ ಪರಿಸ್ಥಿತಿಯನ್ನು ಅನುಭವಿಸಿದ ಬಳಿಕ ಪತಿಯ ಮನೆಯಿಂದ ಹೊರಬಂದೆ ಎಂದು ಹೇಳಿದರು.

ಇದೇ ವೇಳೆ, ತಮ್ಮ ತಾಯಿ ಮನೆಯ ಬಳಿ ಬಂದು ಅರ್ಜಿದಾರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿದ್ದಾರೆ. ಈ ಸಂಬಂಧ ಪ್ರತ್ಯೇಕ ಮಾನಹಾನಿ ಪ್ರಕರಣವನ್ನೂ ದಾಖಲಿಸಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅರ್ಜಿದಾರರ ಪರ ವಕೀಲರು, ಅತ್ತೆ, ಆಕೆಯ ಇಬ್ಬರು ಸಹೋದರರು ಹಾಗೂ ಪತಿಯ ಸ್ನೇಹಿತನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದರು. ಪ್ರಕರಣ ಇನ್ನೂ ಎಫ್‌ಐಆರ್‌ ಹಂತದಲ್ಲಿದ್ದು, ಪತಿ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಎರಡೂ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್‌, ಪ್ರಕರಣದ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img