HomeKarnataka Newsಪತಿಯ ಪ್ರೇಯಸಿಯನ್ನು ‘ಸಂಬಂಧಿ’ ಎಂದು ಪರಿಗಣಿಸಿ ಕೌಟುಂಬಿಕ ಕ್ರೌರ್ಯ ಕೇಸ್ ಹಾಕುವಂತಿಲ್ಲ: ಹೈಕೋರ್ಟ್

ಪತಿಯ ಪ್ರೇಯಸಿಯನ್ನು ‘ಸಂಬಂಧಿ’ ಎಂದು ಪರಿಗಣಿಸಿ ಕೌಟುಂಬಿಕ ಕ್ರೌರ್ಯ ಕೇಸ್ ಹಾಕುವಂತಿಲ್ಲ: ಹೈಕೋರ್ಟ್

ಬೆಂಗಳೂರು: ವಿವಾಹಿತ ಪುರುಷನ ಪ್ರೇಯಸಿಯನ್ನು ಆತನ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಪತ್ನಿಯ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 85ರ ಅಡಿ ಆಕೆಯನ್ನು ಆರೋಪಿಯನ್ನಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.

ತಮ್ಮ ವಿರುದ್ಧ ಬೆಂಗಳೂರಿನ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಾಲ್ಕನೇ ಆರೋಪಿ ತನುಶ್ರೀ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ಮಹಿಳೆ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಿ ಆದೇಶಿಸಿದೆ.

‘ಪ್ರೇಯಸಿ ಪತಿಯ ಸಂಬಂಧಿಯಲ್ಲ’

ವಿವಾಹೇತರ ಸಂಬಂಧ ಹೊಂದಿರುವ ಮಹಿಳೆಯನ್ನು ‘ಪತಿಯ ಸಂಬಂಧಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದಿನ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿರುವುದನ್ನು ಹೈಕೋರ್ಟ್ ಉಲ್ಲೇಖಿಸಿದೆ.

ರಕ್ತಸಂಬಂಧ, ವಿವಾಹ ಅಥವಾ ದತ್ತು ಸ್ವೀಕಾರದ ಮೂಲಕ ಸಂಬಂಧಿಯ ಸ್ಥಾನಮಾನ ಬರುತ್ತದೆ. ವಿವಾಹವೇ ನಡೆದಿಲ್ಲದ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಮತ್ತೊಬ್ಬರ ಸಂಬಂಧಿ ಎಂದು ಪರಿಗಣಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ BNS ಸೆಕ್ಷನ್ 85ರ ಆರೋಪದಡಿ ಅರ್ಜಿದಾರ ಮಹಿಳೆಯನ್ನು ಪ್ರಕರಣದಲ್ಲಿ ಆರೋಪಿಯಾಗಿ ಮುಂದುವರಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

‘ಕ್ರಿಮಿನಲ್ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ’

ದೂರಿನಲ್ಲಿ ಉಲ್ಲೇಖಿಸಲಾಗಿರುವ ಇತರ ಅಪರಾಧಗಳಿಗೆ ಅಗತ್ಯವಾದ ಅಂಶಗಳೂ ಅರ್ಜಿದಾರರ ವಿರುದ್ಧ ಕಂಡುಬಂದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಹೀಗಾಗಿ ಅರ್ಜಿದಾರ ಮಹಿಳೆ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಪ್ರಕರಣದ ಮೊದಲ ಆರೋಪಿ ಎಂ. ಧನುಷ್ ಕುಮಾರ್ ಹಾಗೂ ದೂರುದಾರರಾದ ಎಸ್. ಪ್ರತೀಕ್ಷಾ ದಂಪತಿಯಾಗಿದ್ದು, ಇಬ್ಬರ ನಡುವೆ ವೈವಾಹಿಕ ಕಲಹವಿತ್ತು. ಈ ನಡುವೆ ತನುಶ್ರೀ ಅವರು ಧನುಷ್ ಕುಮಾರ್ ಅವರ ಪ್ರೇಯಸಿ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆಕೆಯ ಕಾರಣದಿಂದಲೇ ದಂಪತಿಯ ವೈವಾಹಿಕ ಸಂಬಂಧ ಹದಗೆಟ್ಟಿದೆ ಎಂಬ ಆರೋಪವನ್ನೂ ಮಾಡಲಾಗಿತ್ತು.

ದೂರಿನ ಆಧಾರದ ಮೇಲೆ ತನುಶ್ರೀ ಸೇರಿದಂತೆ ಆರೋಪಿಗಳ ವಿರುದ್ಧ BNS ಸೆಕ್ಷನ್ 74, 85, 352, 351(2) ಜೊತೆಗೆ ಸೆಕ್ಷನ್ 3(5) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವು ಬೆಂಗಳೂರಿನ 6ನೇ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ತನುಶ್ರೀ ಹೈಕೋರ್ಟ್ ಮೆಟ್ಟಿಲೇರಿದ್ದರು.

‘ಬೆದರಿಕೆ ಆರೋಪಕ್ಕೂ ಸಾಕ್ಷ್ಯವಿಲ್ಲ’

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತನುಶ್ರೀ ವಿರುದ್ಧದ ಪ್ರಮುಖ ಆರೋಪವೆಂದರೆ ಅವರು ಪತಿಯ ಪ್ರೇಯಸಿಯಾಗಿದ್ದು, ಪತ್ನಿಗೆ ಕ್ರಿಮಿನಲ್ ಬೆದರಿಕೆ ಹಾಕಿದ್ದಾರೆ ಎಂಬುದಾಗಿದೆ. ಆದರೆ ಈ ಆರೋಪವನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಅರ್ಜಿದಾರ ಮಹಿಳೆಯನ್ನು BNS ಸೆಕ್ಷನ್ 85ರ ವ್ಯಾಪ್ತಿಯಲ್ಲಿ ‘ಪತಿಯ ಸಂಬಂಧಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img