ಬೆಂಗಳೂರು: ಬಸವಣ್ಣನ ಕುರಿತು ಅವಹೇಳನಕಾರಿ ಅಂಶಗಳಿವೆ ಎನ್ನಲಾದ ಪುಸ್ತಕದ ವಿವಾದ ಇದೀಗ ಮತ್ತಷ್ಟು ತೀವ್ರಗೊಂಡಿದೆ.
ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಸವಾಲು ಹಾಕಿರುವ ಲೇಖಕ ರವಿ ಹಂಜ್ ವಿರುದ್ಧ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ರವಿ ಹಂಜ್ ಅವರಿಗೆ ಭಾರತದ ಕಾನೂನಿನ ಅರಿವು ಇಲ್ಲದಂತಿದೆ. ಅವರಿಗೆ ದೇಶದ ಕಾನೂನನ್ನು ನೆನಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ರವಿ ಹಂಜ್ ಸವಾಲು ಹಾಕಿರುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಈ ಪುಸ್ತಕದ ಬಗ್ಗೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗಳು ನಡೆದಿವೆ. ವಿವಿಧ ಸಮುದಾಯಗಳಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಹೀಗಾಗಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪುಸ್ತಕದಲ್ಲಿ ಆಕ್ಷೇಪಾರ್ಹ ಪದಗಳಿಲ್ಲ ಎಂದು ರವಿ ಹಂಜ್ ಹೇಳುತ್ತಿದ್ದಾರೆ. ಆದರೆ, ಸರ್ಕಾರ ಪರಿಶೀಲನೆ ನಡೆಸಿದ ಬಳಿಕವೇ ಈ ನಿರ್ಧಾರ ಕೈಗೊಂಡಿದೆ ಎಂದು ತಿರುಗೇಟು ನೀಡಿದರು. ರವಿ ಹಂಜ್ ಸರ್ಕಾರಕ್ಕೆ ಸವಾಲು ಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಕಾನೂನುಗಳಿವೆ. ರವಿ ಹಂಜ್ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾಗಿದ್ದು, ಭಾರತದ ಕಾನೂನನ್ನು ಮರೆತಿರಬಹುದು. ಅವರಿಗೆ ದೇಶದ ಕಾನೂನುಗಳನ್ನು ನೆನಪಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ರವಿ ಹಂಜ್ ಅವರು ಅಮೆರಿಕ ರಾಯಭಾರ ಕಚೇರಿಯ ಸಹಾಯ ಕೋರಿರುವ ವಿಚಾರಕ್ಕೂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಅವರು ಅಮೆರಿಕದ ಪ್ರಜೆಯಾಗಿರುವುದರಿಂದ ಅಲ್ಲಿನ ರಾಯಭಾರ ಕಚೇರಿಗೆ ತಮ್ಮ ಸಮಸ್ಯೆ ತಿಳಿಸಿ ರಕ್ಷಣೆ ಕೋರಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಸವಣ್ಣನ ಕುರಿತ ಪುಸ್ತಕದ ಮುಟ್ಟುಗೋಲು ಆದೇಶ, ಲೇಖಕರ ಸವಾಲು ಹಾಗೂ ಸರ್ಕಾರದ ಪ್ರತಿಕ್ರಿಯೆಯಿಂದಾಗಿ ಈ ವಿವಾದ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.







