ಬೆಂಗಳೂರು: ವರದಕ್ಷಿಣೆ ಕಿರುಕುಳ ಹಾಗೂ ಸಂತಾನವಾಗದ ಕಾರಣದಿಂದ ಉಂಟಾಗಿದ್ದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 25 ವರ್ಷದ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೊರೆನಾಗಸಂದ್ರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಕಾವ್ಯ (25) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಕುಟುಂಬದವರ ಸಮ್ಮುಖದಲ್ಲಿ ನವೀನ್ ಅವರೊಂದಿಗೆ ಕಾವ್ಯ ಅವರ ವಿವಾಹ ನಡೆದಿತ್ತು. ವಿವಾಹದ ಬಳಿಕ ದಂಪತಿ ನೆಲಮಂಗಲ ಸಮೀಪದ ಸೊಂಡೆಕೊಪ್ಪದಲ್ಲಿ ವಾಸಿಸುತ್ತಿದ್ದರು.
ವಿವಾಹವಾಗಿ ಮೂರು ವರ್ಷ ಕಳೆದರೂ ಸಂತಾನವಾಗದ ಕಾರಣ ದಂಪತಿ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೇ ಕಾರಣದಿಂದ ಮನನೊಂದ ಕಾವ್ಯ, ತಡರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಿದರು.
ಮೃತ ಕಾವ್ಯ ಅವರ ಪೋಷಕರು, ಪತಿ ನವೀನ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

