ಹಾಸನ: ತಾಯಿ ಚೆನ್ನಮ್ಮ ಅವರ ನಿಧನದ ನೋವಿನಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಕಣ್ಣೀರಿಡುತ್ತಲೇ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ವೇಳೆ ತಾಯಿಯನ್ನು ನೆನೆದು ಭಾವುಕರಾದ ರೇವಣ್ಣ, ಬಿಕ್ಕಿ ಬಿಕ್ಕಿ ಅತ್ತರು. ತಾಯಿಯ ಬಗ್ಗೆ ಮಾತನಾಡಿದ ಅವರು, “ನನ್ನ ದೇವತೆಯನ್ನೇ ಕಳೆದುಕೊಂಡೆ… ನನ್ನ ಮನೆಯೇ ಹೋಯಿತು” ಎಂದು ದುಃಖ ವ್ಯಕ್ತಪಡಿಸಿದರು.
“ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡಿದ್ದರು. 25 ವರ್ಷ ನೋವು ಅನುಭವಿಸಿದ್ದರು. ಆದರೂ ಯಾರಿಗೂ ಅನ್ಯಾಯ ಮಾಡಲಿಲ್ಲ. ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಊಟ ಮಾಡಿಸಿ, ಸೀರೆ, ಕುಂಕುಮ ನೀಡಿ ಕಳುಹಿಸುತ್ತಿದ್ದರು. ಓದುವ ಮಕ್ಕಳಿಗೆ ಊಟ ಹಾಕಿದ್ದರು” ಎಂದು ತಾಯಿಯ ಸೇವಾ ಗುಣಗಳನ್ನು ನೆನಪಿಸಿಕೊಂಡರು.
ಚೆನ್ನಮ್ಮ ಅವರ ಆರೋಗ್ಯದ ಕುರಿತು ಮಾತನಾಡಿದ ರೇವಣ್ಣ, “ನಿನ್ನೆ ಬೆಳಗ್ಗೆ ವೈದ್ಯರು ಶೇ.30ರಷ್ಟು ಚೇತರಿಕೆ ಕಂಡುಬಂದಿದೆ ಎಂದು ಹೇಳಿದ್ದರು. ನಾನು ತಿರುಪತಿಗೆ ಹೋಗಿ ಬಂದು ಅವರೊಂದಿಗೆ ಕೊನೆಯದಾಗಿ ಮಾತನಾಡಿಸಿದ್ದೆ. ಆದರೆ ಈಗ ಅವರನ್ನು ಕಳೆದುಕೊಂಡಿದ್ದೇನೆ” ಎಂದು ಕಣ್ಣೀರಿಟ್ಟರು.
ಚೆನ್ನಮ್ಮ ಅವರ ಸರಳತೆ ಹಾಗೂ ಮಾನವೀಯ ಗುಣಗಳನ್ನು ಸ್ಮರಿಸಿದ ಅವರು, ಶೃಂಗೇರಿ ಶ್ರೀಗಳು ಕೂಡ ಚೆನ್ನಮ್ಮ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದರು ಎಂದು ಹೇಳಿದರು.
“ಅವರು ಯಾರಿಗೂ ಕೆಡುಕು ಬಯಸಿದವರಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಅಂತಹ ಮಹಾತಾಯಿಯನ್ನು ಕಳೆದುಕೊಂಡಿದ್ದೇನೆ” ಎಂದು ಹೆಚ್.ಡಿ. ರೇವಣ್ಣ ಭಾವುಕರಾದರು.



