ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಶಿಬಿರದಲ್ಲಿ ಕೆಲ ಆನೆಗಳು ಗಾಯದಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವ ಸಚಿವರು,
“ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿದ್ದ ‘ಬಾಲಣ್ಣ’ ಎಂಬ 35 ವರ್ಷದ ಆನೆ ಐ.ವಿ. ಚುಚ್ಚುಮದ್ದು ನೀಡುವ ವೇಳೆ ನಿರ್ಲಕ್ಷ್ಯದಿಂದ ಸಂಕ್ರಮಣಗೊಂಡು ನರಳುತ್ತಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಶಿಬಿರದಲ್ಲಿರುವ ‘ಸಾಗರ್’ ಸೇರಿದಂತೆ ನಾಲ್ಕು ಆನೆಗಳು ಗಾಯಗೊಂಡು ಬಳಲುತ್ತಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಇಲ್ಲಿ ಪಶುವೈದ್ಯರ ಕೊರತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ವೈದ್ಯರ ಕೊರತೆ ಇದ್ದರೆ ಗುತ್ತಿಗೆಯ ಆಧಾರದಲ್ಲಿ ಅಥವಾ ನಿಯೋಜನೆಯ ಮೇಲೆ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಈ ಹಿಂದೆ ಹಲವು ಸಭೆಗಳಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತುರ್ತು ಕ್ರಮ ವಹಿಸಲು ಮತ್ತು ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವ ವೇಳೆ ವೈದ್ಯಾಧಿಕಾರಿ, ಅಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಇದ್ದಲ್ಲಿ, ಅವರ ವಿರುದ್ಧ ಶಿಸ್ತುಕ್ರಮದ ಶಿಫಾರಸಿನೊಂದಿಗೆ 1 ವಾರದೊಳಗೆ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದ್ದಾರೆ.