ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ವಾಯ್. ಹುಬ್ಬಳ್ಳಿ, ಗದಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಸಮಸ್ಯೆ, ಪೌರ ಕಾರ್ಮಿಕರ ಸಮಸ್ಯೆ, ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದು, ದೇವದಾಸಿಯರ ಸಮಸ್ಯೆ ಸೇರಿದಂತೆ ರಾಜ್ಯದಾದ್ಯಂತ ದಲಿತ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮನವಿಯಲ್ಲಿ ಎಸ್.ಸಿ./ಎಸ್.ಟಿ. ಸಮುದಾಯದ ಸಮಸ್ಯೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗವನ್ನು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜೈ ಭೀಮ್ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್. ತೌಜಲ್, ರೋಣ ತಾಲೂಕು ಅಧ್ಯಕ್ಷ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ರಾಷ್ಟ್ರೀನ್ ಜೋಸೆಪ್, ಉಪಾಧ್ಯಕ್ಷ ರಾಜೇಶ ವಿ. ಶೆಟ್ಟರ್, ಯುವ ಘಟಕದ ಜಿಲ್ಲಾಧ್ಯಕ್ಷ ಇಮಾಮಹುಸೇನ ಕುನ್ನಿಬಾವಿ, ಕಾರ್ಯದರ್ಶಿ ಸಮೀರ ಅಹ್ಮದ್ ಕುನ್ನಿಬಾವಿ, ಬಾಬು ಬಳ್ಳಾರಿ, ಮಂಜುನಾಥ ಸಂದಿಮನಿ, ಯುವ ಘಟಕದ ಅಧ್ಯಕ್ಷ ಪ್ರೇಮಕುಮಾರ ಹುಬ್ಬಳ್ಳಿ, ಮಂಜುನಾಥ ಸುಂಕದ, ಶ್ರೀಕಾಂತ ಹಲವಾಗಲಿ, ಹೇಮಂತ ಹುಬ್ಬಳ್ಳಿ, ವಿರುಪಾಕ್ಷ ಗೌಡರ, ಗಿರೀಶ ಚಳಗೇರಿ, ರಫೀಕ ನವಲಗುಂದ, ಫರದೀನ ಕಾಟಾಪುರ, ಮಲ್ಲೇಶ ಮೇಳದಾಳಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.



