HomeGadag Newsಬರದ ಸಂಕಷ್ಟದಲ್ಲಿ ರೈತರಿಗೆ ಕೃಷಿ ಇಲಾಖೆ ಸಲಹೆ

ಬರದ ಸಂಕಷ್ಟದಲ್ಲಿ ರೈತರಿಗೆ ಕೃಷಿ ಇಲಾಖೆ ಸಲಹೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರು ಅನುಸರಿಸಬೇಕಾದ ಆಗಸ್ಟ್ ಮೊದಲ ವಾರದ ಪರ್ಯಾಯ ಬೆಳೆ ನಿರ್ವಹಣಾ ಕ್ರಮಗಳನ್ನು ಕೃಷಿ ಇಲಾಖೆ ಪ್ರಕಟಿಸಿದೆ.

ಹೆಸರು ಬೆಳೆಗೆ ವಿಶೇಷ ಕಾಳಜಿ

ಹೆಸರು ಬೆಳೆಯಲ್ಲಿ ತೇವಾಂಶದ ಕೊರತೆಯನ್ನು ನೀಗಿಸಲು ಬಿತ್ತನೆಯಾದ 30 ಹಾಗೂ 45ನೇ ದಿನಗಳಲ್ಲಿ ಶೇ.1ರ 19:19:19 ಅಥವಾ ಪೊಟ್ಯಾಸಿಯಂ ನೈಟ್ರೇಟ್ ನೀರಿನಲ್ಲಿ ಕರಗುವ ಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಿಸಬೇಕು. ಹೂ ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 7-8 ಗ್ರಾಂ ಪಲ್ಸ್ ಬೂಸ್ಟರ್ ಅಥವಾ ಪಲ್ಸ್ ಮ್ಯಾಜಿಕ್ ಬೆರೆಸಿ ಸಿಂಪಡಿಸಿದರೆ ಉತ್ತಮ. ಸಾಧ್ಯವಾದರೆ ಒಂದು ಜೀವರಕ್ಷಕ ನೀರಾವರಿ ಒದಗಿಸಬೇಕು.

ಗೋವಿನ ಜೋಳಕ್ಕೆ ಮೇಲುಗೊಬ್ಬರ, ಕೀಟ ನಿಯಂತ್ರಣಕ್ಕೆ ಒತ್ತು

ಗೋವಿನ ಜೋಳದಲ್ಲಿ ಮಣ್ಣಿನಲ್ಲಿ ತೇವಾಂಶವಿದ್ದರೆ ಪ್ರತಿ ಎಕರೆಗೆ 44 ಕೆ.ಜಿ. ಯೂರಿಯಾವನ್ನು ಎರಡು ಹಂತಗಳಲ್ಲಿ ಮೇಲುಗೊಬ್ಬರವಾಗಿ ನೀಡಬೇಕು. ತೇವಾಂಶ ಕೊರತೆಯಿದ್ದರೆ 19:19:19 ಅಥವಾ ಪೊಟ್ಯಾಸಿಯಂ ನೈಟ್ರೇಟ್ ದ್ರಾವಣವನ್ನು ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಜೀವಾಮೃತ ಬಳಸುವುದು ಹಾಗೂ ಜೀವರಕ್ಷಕ ನೀರಾವರಿ ನೀಡುವುದು ಸೂಕ್ತ.

ಸೈನಿಕ ಹುಳು ಹಾಗೂ ಲದ್ದಿ ಹುಳುವಿನ ಬಾಧೆ ಕಂಡುಬಂದರೆ ಎಮಾಮೆಕ್ಟಿನ್ ಬೆಂಜೋಯೇಟ್ ಅಥವಾ ಕ್ಲೋರಂಟ್ರಾನಿಲಿಪ್ರೋಲ್ ಔಷಧವನ್ನು ಸಂಜೆ ವೇಳೆಯಲ್ಲಿ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ.

ಶೇಂಗಾ ಬೆಳೆಗೆ ಜಿಪ್ಸಮ್ ಮತ್ತು ಎಲೆ ಸಿಂಪರಣೆ

ಶೇಂಗಾ ಬೆಳೆಯಲ್ಲಿ ಮಣ್ಣಿನ ತೇವಾಂಶ ಕಾಪಾಡಲು ಅಂತರ ಬೇಸಾಯ ಮಾಡಬೇಕು. ಬಿತ್ತನೆಯಾದ 35ರಿಂದ 40 ದಿನಗಳಲ್ಲಿ ಪ್ರತಿ ಎಕರೆಗೆ 200 ಕೆ.ಜಿ. ಜಿಪ್ಸಮ್ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ತೇವಾಂಶದ ಕೊರತೆಯಿದ್ದರೆ ಶೇ.2ರ ಯೂರಿಯಾ ಅಥವಾ ಶೇ.1ರ ಪೊಟ್ಯಾಸಿಯಂ ನೈಟ್ರೇಟ್ ದ್ರಾವಣವನ್ನು ಸಿಂಪಡಿಸುವುದರ ಜೊತೆಗೆ ಜೀವಾಮೃತ ಬಳಸಬೇಕು.

ಬಿತ್ತನೆಯಾಗದ ಜಮೀನಿಗೆ ಪರ್ಯಾಯ ಸಲಹೆ

ಇನ್ನೂ ಬಿತ್ತನೆಯಾಗದ ಜಮೀನಿನಲ್ಲಿ ಆಗಸ್ಟ್‌ನಲ್ಲಿ ಮಳೆಯಾದರೆ ಕಡಿಮೆ ಅವಧಿಯ ಹಾಗೂ ಬರನಿರೋಧಕ ಬೆಳೆಗಳಾದ ಸಜ್ಜೆ (ವಿಪಿಎಂವಿ-9) ಮತ್ತು ನವಣೆ (ಎಚ್‌ಎನ್-46) ಬಿತ್ತನೆ ಮಾಡಬಹುದು. ಇಲ್ಲವೇ ಚೌಕ ಮಡಿಗಳು ಅಥವಾ ಬೋದು-ಹರಿ ಸಾಲುಗಳನ್ನು ನಿರ್ಮಿಸಿ ಮಳೆ ನೀರನ್ನು ಜಮೀನಿನಲ್ಲೇ ಹಿಂಗಿಸಿ ಹಿಂಗಾರು ಬೆಳೆಗಳಿಗೆ ತೇವಾಂಶ ಸಂರಕ್ಷಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

“ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರು ಬೆಳೆ ನಿರ್ವಹಣಾ ಕ್ರಮಗಳನ್ನು ತಪ್ಪದೇ ಅನುಸರಿಸಿದರೆ ಬೆಳೆ ನಷ್ಟವನ್ನು ಗಣನೀಯವಾಗಿ ತಗ್ಗಿಸಬಹುದು.”

ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ, ಗದಗ ಜಿಲ್ಲೆ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img