ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ನಿರ್ಣಾಯಕ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಆತ್ಮವಿಶ್ವಾಸ, ಶಿಸ್ತು ಮತ್ತು ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಖಚಿತ ಎಂದು ಪಿಎಸ್‌ಐ ನಾಗರಾಜ ಗಡಾದ ಹೇಳಿದರು.
ಪಟ್ಟಣದ ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ 2026-27ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿಗಳು ಮಕ್ಕಳ ಭವಿಷ್ಯಕ್ಕಾಗಿ ಅಪಾರ ತ್ಯಾಗ ಮಾಡುತ್ತಾರೆ. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ, ಶಿಸ್ತು, ಸಂಯಮ ಮತ್ತು ಸನ್ನಡತೆಯೊಂದಿಗೆ ಬದುಕಿದರೆ ಅದೇ ಪಾಲಕರಿಗೆ ಹಾಗೂ ಸಮಾಜಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗುತ್ತದೆ ಎಂದು ಹೇಳಿದರು.
ಕಾಲೇಜಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಸಾಧನೆಯ ಗುರಿಯೊಂದಿಗೆ ಮುನ್ನಡೆಯಬೇಕು. ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಎ.ವೈ. ಕಳ್ಳಿಮನಿ ಮಾತನಾಡಿ, ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯವು ಸುಮಾರು 76 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಇಲ್ಲಿಂದ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಾಲೇಜಿನ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದ್ದು, ಮುಂದೆಯೂ ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ರೂಪುಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನೀಲಪ್ಪ ಗೊರವರ, ಯಶವಂತ ಸೂರಣಗಿ ಹಾಗೂ ಅನ್ನಪೂರ್ಣ ದುರ್ಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ನೂತನ ವಿದ್ಯಾರ್ಥಿ ಸಂಸತ್ತಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ಜಿ. ಹುಳಕನವರ, ಮಂಜುನಾಥ ಬೂದಿಹಾಳ, ಎಚ್.ಎಲ್. ಕೋರಿ, ಎಂ.ಎಲ್. ಬೋದ್ಲೆಖಾನ್, ಎಫ್.ಎಂ. ಚಕಾರದ, ಪಿ.ಡಿ. ದೇಶಪಾಂಡೆ, ಎಫ್.ಜಿ. ಕರೆಪ್ಪಗೌಡ್ರ, ಜಿ.ಪಿ. ಹಿರೇಮಠ, ಐ.ಎಂ. ಸಂಗಟಾಳೂರ, ಡಿ.ಎಂ. ಪೂಜಾರ, ಬಿ.ಜೆ. ಪಾಟೀಲ, ಎಂ.ಆರ್. ಬನ್ನಿಕೊಪ್ಪ ಸೇರಿದಂತೆ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಾಗವೇಣಿ ಶರಸೂರಿ, ನಾಗಲಕ್ಷ್ಮಿ ಪಾಟೀಲ ಹಾಗೂ ಪವಿತ್ರಾ ಕಿಳ್ಳಿಕ್ಯಾತರ ಕಾರ್ಯಕ್ರಮ ನಿರೂಪಿಸಿದರು.
“ಮೊಬೈಲ್‌ಗೆ ಮಿತಿ ಹಾಕಿ, ಗುರಿಗೆ ಗತಿ ಕೊಡಿ. ಶಿಸ್ತು, ಸಂಯಮ ಮತ್ತು ಪರಿಶ್ರಮವೇ ಯಶಸ್ಸಿನ ನಿಜವಾದ ಸೂತ್ರ.”
ನಾಗರಾಜ ಗಡಾದ, ಪಿಎಸ್‌ಐ



