ಬೆಂಗಳೂರು: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣದಿಂದಾಗಿ ರಸ್ತೆಗಳಲ್ಲಿ ಗೋಚರತೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲಕರು ಪಾದಚಾರಿಗಳು, ಪ್ರಯಾಣಿಕರು ಹಾಗೂ ಇತರ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸೂಚನೆ ನೀಡಿದೆ.
ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಬೆಳಗಿನ ಜಾವ ಮಂಜು ಹೆಚ್ಚಾಗಿರುವ ಸಂದರ್ಭದಲ್ಲಿ ವಾಹನ ಚಾಲನೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಚಾಲಕರಿಗೆ ಸಲಹೆ ನೀಡಿದೆ. ಅಪಘಾತಗಳನ್ನು ತಡೆಗಟ್ಟಲು ವಾಹನದ ನಿರ್ವಹಣೆ ಮತ್ತು ಸುರಕ್ಷಿತ ಚಾಲನೆಗೆ ಸಂಬಂಧಿಸಿದ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ವಾಹನ ಚಾಲನೆಗೂ ಮುನ್ನ ಈ ಪರಿಶೀಲನೆ ಕಡ್ಡಾಯ
ಪ್ರಯಾಣ ಆರಂಭಿಸುವ ಮೊದಲು ವಾಹನದ ಹೆಡ್ಲೈಟ್, ಇಂಡಿಕೇಟರ್, ಬ್ರೇಕ್ಲೈಟ್ ಹಾಗೂ ವೈಪರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಮಂಜು ಅಥವಾ ಕಡಿಮೆ ಗೋಚರತೆ ಇರುವ ಸಂದರ್ಭದಲ್ಲಿ ಹೈ-ಬೀಮ್ ಬದಲಿಗೆ ಲೋ-ಬೀಮ್ ಲೈಟ್ ಬಳಸಬೇಕು. ಜೊತೆಗೆ ವಾಹನದ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು KSRTC ಸೂಚಿಸಿದೆ.
ವಾಹನಗಳ ನಡುವೆ ಸಾಕಷ್ಟು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ವಾಹನವನ್ನು ನಿಲ್ಲಿಸಲು ಬೇಕಾಗುವ ಅಂತರವನ್ನು ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಬೇಕು. ಅನಗತ್ಯ ಓವರ್ಟೇಕ್, ಅಪಾಯಕಾರಿ ಲೇನ್ ಬದಲಾವಣೆ, ಹಠಾತ್ ಬ್ರೇಕ್ ಹಾಕುವುದು ಹಾಗೂ ವೇಗವನ್ನು ಪದೇಪದೇ ಹೆಚ್ಚಿಸುವುದನ್ನು ತಪ್ಪಿಸಬೇಕು ಎಂದು ತಿಳಿಸಿದೆ.
ಆಯಾಸದ ಸ್ಥಿತಿಯಲ್ಲಿ ಚಾಲನೆ ಮಾಡಬೇಡಿ
ದೀರ್ಘ ಪ್ರಯಾಣದ ವೇಳೆ ಚಾಲಕರು ಅಗತ್ಯ ವಿಶ್ರಾಂತಿ ಪಡೆಯಬೇಕು. ಆಯಾಸ ಅಥವಾ ನಿದ್ರಾಹೀನ ಸ್ಥಿತಿಯಲ್ಲಿ ವಾಹನ ಚಲಾಯಿಸಬಾರದು. ಮುಂಜಾನೆ ಮತ್ತು ರಾತ್ರಿ ವೇಳೆ ಮಂಜಿನ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜಾಗರೂಕತೆ ವಹಿಸಬೇಕು. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ವಾಹನಗಳ ಸಮೀಪ ವಾಹನ ಚಲಾಯಿಸುವಾಗ ವಿಶೇಷ ಎಚ್ಚರಿಕೆ ಅಗತ್ಯ ಎಂದು ಸೂಚಿಸಲಾಗಿದೆ.
ಇದರ ಜೊತೆಗೆ ವಾಹನದ ಟೈರ್ಗಳ ಸ್ಥಿತಿ ಮತ್ತು ಗಾಳಿಯ ಒತ್ತಡವನ್ನು ನಿಯಮಿತವಾಗಿ ಪರಿಶೀಲಿಸಬೇಕು. ಮಳೆ, ಮಂಜು ಅಥವಾ ಜಾರುವ ರಸ್ತೆಗಳು, ತಿರುವುಗಳು ಹಾಗೂ ಘಾಟ್ ರಸ್ತೆಗಳಲ್ಲಿ ವೇಗವನ್ನು ಕಡಿಮೆ ಮಾಡಿಕೊಂಡು ಎಚ್ಚರಿಕೆಯಿಂದ ಚಾಲನೆ ಮಾಡಬೇಕು.
ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ
ಬಸ್ಗಳಲ್ಲಿ ಪ್ರಯಾಣಿಕರು ಹತ್ತುವಾಗ ಮತ್ತು ಇಳಿಯುವಾಗ ವಾಹನವನ್ನು ಸಂಪೂರ್ಣವಾಗಿ ನಿಲ್ಲಿಸಿದ ನಂತರವೇ ಮುಂದಿನ ಪ್ರಯಾಣ ಆರಂಭಿಸಬೇಕು ಎಂದು ಚಾಲಕರಿಗೆ ಸೂಚಿಸಲಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಚಾಲನೆಗೂ ಮೊದಲು ಮತ್ತು ಪ್ರಯಾಣ ಮುಗಿದ ಬಳಿಕ ವಾಹನದ ಸುರಕ್ಷತಾ ತಪಾಸಣೆ ನಡೆಸುವುದು ಕಡ್ಡಾಯವಾಗಿದೆ.
ವಾಹನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ದೋಷವನ್ನು ಸರಿಪಡಿಸಿದ ಬಳಿಕವಷ್ಟೇ ವಾಹನವನ್ನು ಮತ್ತೆ ಚಾಲನೆ ಮಾಡಬೇಕು. ಅಲ್ಲದೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅನಧಿಕೃತ ಸ್ಥಳಗಳಲ್ಲಿ ನಿಲುಗಡೆ ಮಾಡದಂತೆ KSRTC ಸೂಚನೆ ನೀಡಿದೆ.







