ವಿಜಯಸಾಕ್ಷಿ ಸುದ್ದಿ, ಗದಗ: 2026-27ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರ್ವಸಿದ್ಧತೆ ಅಂಗವಾಗಿ “ಕೃಷಿ ಭೂಮಿ ಉಳಿಸಿ ಮತ್ತು ಜಮೀನು ಸಂರಕ್ಷಿಸಿ” (ಖೇತ ಬಚಾವೊ) ಅಭಿಯಾನವನ್ನು ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಆತ್ಮ ಯೋಜನೆ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಜೂನ್ 1ರಿಂದ 30ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಅಂಗವಾಗಿ ಜೂನ್ 8ರಂದು ಮುಂಡರಗಿ ತಾಲೂಕಿನ ಕದಾಂಪೂರ ಹಾಗೂ ಚುರ್ಚಿಹಾಳ, ಗದಗ ತಾಲೂಕಿನ ಹೊಸಳ್ಳಿ ಮತ್ತು ಬೆಳಧಡಿ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿ, ಕೃಷಿ ಸಖಿಯರು, ಪಶು ಸಖಿಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.
ರೈತರಿಗೆ ಬೀಜೋಪಚಾರ, ಮಣ್ಣಿನ ಸಂರಕ್ಷಣೆ, ನೈಸರ್ಗಿಕ ಕೃಷಿ, ಪರ್ಯಾಯ ಬೆಳೆ ಪದ್ಧತಿ, ಜೈವಿಕ ಗೊಬ್ಬರ ಬಳಕೆ, ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ಬಳಕೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಕಡಿಮೆ ಅಡುಗೆ ಎಣ್ಣೆ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ಲಾಭಗಳ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.
ರಸಗೊಬ್ಬರಗಳನ್ನು ಸಮತೋಲಿತವಾಗಿ ಬಳಸುವ ಮೂಲಕ ಜಮೀನು ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದರು. ಇದೇ ವೇಳೆ ಬೀಜೋಪಚಾರದ ಪ್ರಾತ್ಯಕ್ಷಿಕೆ ನಡೆಸಿ ರೈತರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ಉದ್ದಿನ ಕಾಳಿನ ಮಿನಿ ಕಿಟ್‌ಗಳನ್ನು ವಿತರಿಸಲಾಗಿದ್ದು, ಬಿತ್ತನೆ ಕುರಿತ ಮಾರ್ಗದರ್ಶನ ನೀಡಲಾಯಿತು. ಜಿಲ್ಲೆಯ ವಿವಿಧ ಗ್ರಾಮಗಳ 300ಕ್ಕೂ ಹೆಚ್ಚು ರೈತರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.



