ವಿಜಯಪುರ: ಜಮೀನು ವಿವಾದದ ಹಿನ್ನೆಲೆಯಲ್ಲಿ ನಡೆದ ಘರ್ಷಣೆಯಲ್ಲಿ ತಂದೆ ಮತ್ತು ಮಗನನ್ನು ದೊಣ್ಣೆ ಹಾಗೂ ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

ಹನುಮಂತ ಸಾಲವಾಡಗಿ ಹಾಗೂ ಅವರ ಪುತ್ರ ಮಂಜುನಾಥ ಸಾಲವಾಡಗಿ ಕೊಲೆಯಾದವರು. ಘಟನೆಯಲ್ಲಿ ಮಹಾದೇವಪ್ಪ ಹಾಗೂ ಮಲ್ಲಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಡಲಗಿ ಗ್ರಾಮದ ಹನುಮವ್ವ ಮೇಟಿ ಅವರಿಗೆ ಸೇರಿದ ಸರ್ವೇ ನಂಬರ್ 213/2ರಲ್ಲಿರುವ 8 ಎಕರೆ ಜಮೀನನ್ನು ಕಳೆದ ಎರಡು ವರ್ಷಗಳಿಂದ ಹನುಮಂತ ಸಾಲವಾಡಗಿ ಕುಟುಂಬ ಪಾಲು ಆಧಾರದ ಮೇಲೆ ಉಳುಮೆ ಮಾಡಿಕೊಂಡು ಬರುತ್ತಿತ್ತು. ಕಳೆದ ಬಾರಿ ಈ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದ ಕುಟುಂಬ, ಈ ಬಾರಿ ಕಬ್ಬು ಬೆಳೆದಿತ್ತು. ಕಬ್ಬು ಕಟಾವಿಗೆ ಸಿದ್ಧವಾಗಿದ್ದ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಕರೆಸಿ ಪೂಜೆ ಸಲ್ಲಿಸಿ ಕಟಾವು ಆರಂಭಿಸಲು ಮುಂದಾಗಿದ್ದರು.
ಈ ವೇಳೆ ಜಮೀನಿನ ಮಾಲೀಕರ ಸಂಬಂಧಿಕರಾದ ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ, ನಾಗಪ್ಪ ಮೇಟಿ ಸೇರಿದಂತೆ ಇತರರು ಸ್ಥಳಕ್ಕೆ ಆಗಮಿಸಿ, ಜಮೀನಿನ ಮೇಲೆ ವಿವಾದವಿದೆ. ಕಬ್ಬು ಕಟಾವು ಮಾಡಲು ಬಿಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಘರ್ಷಣೆಗೆ ತಿರುಗಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮೇಟಿ ಕುಟುಂಬದವರು ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಹನುಮಂತ ಸಾಲವಾಡಗಿ ಮತ್ತು ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜಮೀನು ವಿವಾದಕ್ಕೆ ಸಂಬಂಧವೇ ಇಲ್ಲದ ಕುಟುಂಬಕ್ಕೆ ಸಂಕಷ್ಟ:
ಮೇಟಿ ಕುಟುಂಬದ ದಾಯಾದಿಗಳ ನಡುವಿನ ಜಮೀನು ವಿವಾದದಿಂದಾಗಿ ಸುಮಾರು 8 ಎಕರೆ ಜಮೀನು ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಕುಟುಂಬ ನಿರ್ವಹಣೆಗೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆದ ಪಂಚಾಯಿತಿ ಬಳಿಕ ಹನುಮವ್ವ ಮೇಟಿ ಅವರು ಸಾಲವಾಡಗಿ ಕುಟುಂಬಕ್ಕೆ ಜಮೀನು ಉಳುಮೆ ಮಾಡಲು ನೀಡಿದ್ದರು ಎನ್ನಲಾಗಿದೆ.
ಆದರೆ ಜಮೀನು ವಿವಾದದ ಕಾರಣದಿಂದ ಯಾವುದೇ ಸಂಬಂಧವಿಲ್ಲದ ಸಾಲವಾಡಗಿ ಕುಟುಂಬದ ತಂದೆ-ಮಗನ ಜೀವ ಹೋಗಿರುವುದಕ್ಕೆ ಹನುಮವ್ವ ಮೇಟಿ ಹಾಗೂ ಮೃತರ ಪತ್ನಿ ಶಿವಬಾಯಿ ಕಣ್ಣೀರಿಟ್ಟಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಕಟ್ಟಿಮನಿ ಹಾಗೂ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಎಸ್ಒಸಿಒ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೊಲ್ಹಾರ ಪೊಲೀಸರು, ಪ್ರಮುಖ ಆರೋಪಿಗಳಾದ ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ ಹಾಗೂ ನಾಗಪ್ಪ ಮೇಟಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.









