ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿರುವುದಾಗಿ ತಿಳಿಸಲಾಗಿದೆ. ಪರೀಕ್ಷಾ ಮಂಡಳಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ,
ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24ರಿಂದ ಮೇ 29ರವರೆಗೆ ನಿಗದಿಯಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ಹಾಗೂ ಪರೀಕ್ಷೆ-2 ಮೇ 3ರಿಂದ ಮೇ 15ರವರೆಗೆ ನಡೆಯಲಿದೆ ಎಂದು ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-1ರ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 22ರಂದು ಪ್ರಥಮ ಭಾಷೆ, ಮಾರ್ಚ್ 25ರಂದು ವಿಜ್ಞಾನ, ಮಾರ್ಚ್ 27ರಂದು ದ್ವಿತೀಯ ಭಾಷೆ, ಮಾರ್ಚ್ 30ರಂದು ಗಣಿತ, ಏಪ್ರಿಲ್ 2ರಂದು ತೃತೀಯ ಭಾಷೆ ಹಾಗೂ ಏಪ್ರಿಲ್ 5ರಂದು ಸಮಾಜ ವಿಜ್ಞಾನ ಪರೀಕ್ಷೆ ನಿಗದಿಯಾಗಿದೆ.
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ-2ರ ವೇಳಾಪಟ್ಟಿಯಂತೆ ಮೇ 24ರಂದು ಪ್ರಥಮ ಭಾಷೆ, ಮೇ 25ರಂದು ವಿಜ್ಞಾನ, ಮೇ 26ರಂದು ದ್ವಿತೀಯ ಭಾಷೆ, ಮೇ 27ರಂದು ಗಣಿತ, ಮೇ 28ರಂದು ತೃತೀಯ ಭಾಷೆ ಹಾಗೂ ಮೇ 29ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಮತ್ತೊಂದೆಡೆ, ದ್ವಿತೀಯ ಪಿಯುಸಿ ಪರೀಕ್ಷೆ-1ರ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 27ರಂದು ಕನ್ನಡ ಮತ್ತು ಅರೇಬಿಕ್, ಮಾರ್ಚ್ 1ರಂದು ಇಂಗ್ಲಿಷ್, ಮಾರ್ಚ್ 2ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್ ಭಾಷಾ ವಿಷಯಗಳ ಪರೀಕ್ಷೆಗಳು ನಿಗದಿಯಾಗಿವೆ. ಮಾರ್ಚ್ 3ರಂದು ಭೂಗೋಳಶಾಸ್ತ್ರ ಮತ್ತು ಮನಃಶಾಸ್ತ್ರ, ಮಾರ್ಚ್ 4ರಂದು ಸಮಾಜಶಾಸ್ತ್ರ ಮತ್ತು ಭೌತಶಾಸ್ತ್ರ ಹಾಗೂ ಮಾರ್ಚ್ 5ರಂದು ಲೆಕ್ಕಶಾಸ್ತ್ರ ಪರೀಕ್ಷೆ ನಡೆಯಲಿದೆ.
ಮಾರ್ಚ್ 8ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ, ಮಾರ್ಚ್ 9ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 11ರಂದು ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್, ಬಿಸಿನೆಸ್ ಅಂಡ್ ವೆಲ್ನೆಸ್ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯಗಳ ಪರೀಕ್ಷೆ ನಿಗದಿಯಾಗಿದೆ. ಮಾರ್ಚ್ 12ರಂದು ವ್ಯವಹಾರ ಅಧ್ಯಯನ ಮತ್ತು ಗಣಿತ, ಮಾರ್ಚ್ 13ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ ಮತ್ತು ಗೃಹವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ಅದೇ ರೀತಿ ಮಾರ್ಚ್ 15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಕ ವಿಜ್ಞಾನ, ಮಾರ್ಚ್ 16ರಂದು ಸಂಖ್ಯಾಶಾಸ್ತ್ರ ಮತ್ತು ವಿದ್ಯುನ್ಮಾನಶಾಸ್ತ್ರ, ಮಾರ್ಚ್ 17ರಂದು ಹಿಂದಿ ಹಾಗೂ ಮಾರ್ಚ್ 18ರಂದು ಇತಿಹಾಸ ಪರೀಕ್ಷೆ ನಡೆಯಲಿದೆ ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿಯ ಪ್ರಕಾರ, ಮೇ 3ರಂದು ಕನ್ನಡ ಮತ್ತು ಅರೇಬಿಕ್, ಮೇ 4ರಂದು ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ವಿದ್ಯುನ್ಮಾನಶಾಸ್ತ್ರ, ಮೇ 5ರಂದು ರಾಜ್ಯಶಾಸ್ತ್ರ ಮತ್ತು ಗಣಕ ವಿಜ್ಞಾನ ಹಾಗೂ ಮೇ 6ರಂದು ಇತಿಹಾಸ ಮತ್ತು ರಸಾಯನಶಾಸ್ತ್ರ ಪರೀಕ್ಷೆಗಳು ನಿಗದಿಯಾಗಿವೆ.
ಮೇ 7ರಂದು ವ್ಯವಹಾರ ಅಧ್ಯಯನ, ಮನಃಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರ, ಮೇ 8ರಂದು ಐಚ್ಛಿಕ ಕನ್ನಡ, ಭೌತಶಾಸ್ತ್ರ ಮತ್ತು ಮೂಲ ಗಣಿತ ಪರೀಕ್ಷೆಗಳು ನಡೆಯಲಿವೆ. ಮೇ 10ರಂದು ಅರ್ಥಶಾಸ್ತ್ರ ಮತ್ತು ಗಣಿತ, ಮೇ 11ರಂದು ಹಿಂದಿ, ಮೇ 12ರಂದು ಇಂಗ್ಲಿಷ್, ಮೇ 13ರಂದು ಸಮಾಜಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಹಾಗೂ ಮೇ 14ರಂದು ತರ್ಕಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಗೃಹವಿಜ್ಞಾನ ಪರೀಕ್ಷೆಗಳು ನಿಗದಿಯಾಗಿವೆ.
ಇನ್ನು ಮೇ 15ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ರಿಟೇಲ್ ಮತ್ತು ಆಟೋಮೊಬೈಲ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ ಎಂದು ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ವಿಷಯವಾರು ದಿನಾಂಕಗಳು, ಪರೀಕ್ಷೆಯ ಸಮಯ ಹಾಗೂ ಇತರ ಸೂಚನೆಗಳನ್ನು ಗಮನಿಸಬೇಕು. ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ತಮ್ಮ ಶಾಲಾ-ಕಾಲೇಜುಗಳ ಮೂಲಕವೂ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.









