HomeGadag Newsಕೈಗೆಟಕುವ ದರದಲ್ಲಿ ಮೇವು ಪೂರೈಕೆ : ಶ್ರೀಶೈಲ್ ತಳವಾರ

ಕೈಗೆಟಕುವ ದರದಲ್ಲಿ ಮೇವು ಪೂರೈಕೆ : ಶ್ರೀಶೈಲ್ ತಳವಾರ

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬರಗಾಲದಿಂದಾಗಿ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವಿನ ಬ್ಯಾಂಕ್ ಆರಂಭ ಮಾಡಲಾಗಿದೆ. ಪ್ರತಿ ಕೆ.ಜಿ ಮೇವಿಗೆ ಎರಡು ರೂಪಾಯಿಯಂತೆ ರೈತರಿಗೆ ಕೈಗೆಟುಕುವ ದರದಲ್ಲಿ ತಾಲೂಕು ಆಡಳಿತದಿಂದ ಮೇವನ್ನು ಮಾರಾಟ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಕೊಣ್ಣೂರು ಹೋಬಳಿ ಮಟ್ಟದ ಎಲ್ಲ ರೈತರು ಪಡೆದುಕೊಳ್ಳಬೇಕೆಂದು ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.

ಕೊಣ್ಣೂರಿನ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಆಡಳಿತ ವತಿಯಿಂದ 2024-25ನೇ ಸಾಲಿನ ಬರಗಾಲ ಯೋಜನೆಯ ಅಡಿಯಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಮೇವು ಪೂರೈಸುವ ಮೇವು ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಬರಗಾಲದಿಂದಾಗಿ ಕುಡಿಯುವ ನೀರು, ಜಾನುವಾರಗಳಿಗೆ ಮೇವಿನ ಕೊರತೆ ನೀಗಿಸಲು ತಾಲೂಕು ಆಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ಸದ್ಯ ಕೊಣ್ಣೂರು ಹೋಬಳಿ ಮಟ್ಟದಲ್ಲಿ ಸುಮಾರು ಎರಡೂವರೆ ಸಾವಿರ ಜಾನುವಾರಗಳಿಗೆ ಮೇವಿನ ಕೊರತೆ ತಪ್ಪಿಸಲು ಮೇವಿನ ಬ್ಯಾಂಕ್ ಉದ್ಘಾಟನೆ ಮಾಡಲಾಗಿದೆ. ಇದರ ಸದುಪಯೋಗವನ್ನು ಕೊಣ್ಣೂರು ಹೋಬಳಿ ವ್ಯಾಪ್ತಿಗೆ ಬರುವ ವಾಸನ, ಶೀರೋಳ, ಕೊಣ್ಣೂರು, ರೆಡ್ಡರ ನಾಗನೂರು, ಹದಲಿ, ಸುರಕೋಡ ಮತ್ತು ಬೈರನಹಟ್ಟಿ ಗ್ರಾ.ಪಂ ವ್ಯಾಪ್ತಿಯ ರೈತರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಮೇವು ಬ್ಯಾಂಕ್‌ನಿಂದ 1 ಜಾನುವಾರಿಗೆ ಪ್ರತಿನಿತ್ಯ 6 ಕೆ.ಜಿ ಮೇವನ್ನು ಕೊಡಲಾಗುವುದು. ಪ್ರತಿ ರೈತರಿಗೆ 50 ಕೆ.ಜಿವರೆಗೂ ಮೇವನ್ನು ವಿತರಿಸಲಾಗುವುದು. ರೈತರು ಒಂದು ಕೆ.ಜಿ ಮೇವನ್ನು 2 ರೂಪಾಯಿ ಕೊಟ್ಟು ಖರೀದಿ ಮಾಡಬಹುದು. ಇದರಿಂದ ಬರಗಾಲದಲ್ಲಿ ರೈತರ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ ಎಂದರು.

ಕೊಣ್ಣೂರು ಗ್ರಾಮದ ರೈತರಾದ ಸಿದ್ದಪ್ಪ ಡಂಬಳ ಮತ್ತು ಅಲ್ಲಿಸಾಬ್ ಸುರಕೋಡ ಅವರಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್ ಮೇವಿನ ಗಂಟನ್ನು ವಿತರಿಸುವ ಮೂಲಕ ಮೇವಿನ ಬ್ಯಾಂಕ್‌ನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೊಣ್ಣೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ, ಗ್ರಾಮ ಆಡಳಿತಾಧಿಕಾರಿ ಟಿ.ಆರ್. ಪಾಟೀಲ್, ಪಶುಪಾಲನಾ ಇಲಾಖೆಯ ಜಿ.ಎ. ನಿರಾಣಿ, ಕಂದಾಯ ನಿರೀಕ್ಷಕ ಐ.ವಾಯ್. ಕಳಸಣ್ಣವರ, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ಮೇವಿನ ಬ್ಯಾಂಕ್‌ನಲ್ಲಿ ಸದ್ಯ 4 ಟನ್ ಮೇವು ದಾಸ್ತಾನು ಮಾಡಲಾಗಿದ್ದು, ಮುಂದಿನ 2-3 ತಿಂಗಳಿಗೆ ಸಾಕಾಗುವಷ್ಟು ಮೇವನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೇವು ಪೂರೈಕೆ ಮತ್ತು ಸರಬರಾಜಿಗೆ ಟೆಂಡರ್ ಕರೆದು ಟೆಂಡರುದಾರರನ್ನು ಗುರ್ತಿಸಲಾಗಿದೆ. ಮೇವು ಬ್ಯಾಂಕ್‌ನಲ್ಲಿ ಮೇವು ಖಾಲಿಯಾದ ಕೂಡಲೇ ಟೆಂಡರುದಾರರ ಮೂಲಕ ಮೇವು ದಾಸ್ತಾನು ಮಾಡಲಾಗುವುದು. ಮೇವು ಬ್ಯಾಂಕ್ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5.30ರವರೆಗೆ ತೆರದಿರುತ್ತದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು.
– ಡಾ. ವೆಂಕಟೇಶ.
ಸಹಾಯಕ ನಿರ್ದೇಶಕರು,
ಪಶುಸಂಗೋಪನಾ ಇಲಾಖೆ, ನರಗುಂದ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!