ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಪೊಲೀಸ್ ಇಲಾಖೆಯಿಂದ ಜಾರಿಗೆ ತಂದಿರುವ `ಥರ್ಡ್ ಐ’ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾರ್ಗದರ್ಶನಲ್ಲಿ ಬುಧವಾರ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಇಲಾಖೆಯ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸಂಚಾರಿ ನಿಯಮಗಳ ಪ್ರಕಟಣೆಗಳನ್ನು ಪ್ರಚುರಪಡಿಸಲಾಯಿತು. ಗದಗ ಠಾಣೆಯ ಎಎಸ್‌ಐ ಎ.ಬಿ. ದಿಂಡೂರ ಮಾತನಾಡಿ, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ದೃಷ್ಟಿಯಿಂದ ಪಟ್ಟಣದ ಪ್ರಮುಖ ಸರ್ಕಲ್‌ಗಳಲ್ಲಿ ಥರ್ಡ್ ಐ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಥರ್ಡ್ ಐ ಸಿಸಿ ಕ್ಯಾಮರಾ ಮೂಲಕ ಹೆಲ್ಮೆಟ್ ಧರಿಸದಿರುವದು, ತ್ರಿಬಲ್ ರೈಡಿಂಗ್, ಕಾರ್‌ನಲ್ಲಿ ಸೀಟ್‌ಬೆಲ್ಟ್ ಹಾಕದವರ ಬಗ್ಗೆ ವಾಹನದ ನಂಬರ್ ಮೂಲಕವೇ ಮಾಲೀಕರ ಮನೆಗೆ ದಂಡದ ನೋಟಿಸ್ ಹೋಗಲಿದೆ. ಈ ಬಗ್ಗೆ ಜಾಗೃತಿ ಹೊಂದುವ ಮೂಲಕ ತಪ್ಪದೇ ಸಂಚಾರ ನಿಯಮವನ್ನು ಪಾಲಿಸಬೇಕು.
ಮಾರ್ಚ್ 1ರಿಂದ ಥರ್ಡ್ ಐ, ಸಿಸಿ ಕ್ಯಾಮರಾ ಕಾರ್ಯ ಆರಂಭವಾಗಿದೆ. ಸಂಚಾರ ನಿಯಮ ಪಾಲನೆ ಮತ್ತು ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕಾನೂನು ಗೌರವಿಸಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣದ ಠಾಣೆಯ ಎನ್.ಎಂ. ತಳಗೇರಿ ಉಪಸ್ಥಿತರಿದ್ದರು.