ಅನಿರ್ದಿಷ್ಟಾವಧಿ ಧರಣಿ ಅ.4ರಿಂದ : ಕುಮಾರ ಪೂಜಾರ

0
Forced to fulfill various demands from Rural Development Department employees
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದಗಳ ಸಂಘ ಹಾಗೂ ಗ್ರಾ.ಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಬಡ್ತಿ, ಗ್ರಾ.ಪಂಗಳ ಗ್ರೇಡ್‌ಗಳನ್ನು ಹೆಚ್ಚಿಸುವುದು, ಬಡ್ತಿಯಲ್ಲಿನ ಸಮಸ್ಯೆ ನಿವಾರಣೆ, ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 4ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಕುಮಾರ ಪೂಜಾರ ಹೇಳಿದರು.

Advertisement

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ಗ್ರಾ.ಪಂಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಇತರೆ ಸೇವೆಗಳು ಸ್ಥಗಿತಗೊಳ್ಳಲಿವೆ. ಪಂಚಾಯತ ಅಭಿವೃದ್ಧಿ ಅಕಾರಿ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವಂತೆ ಬೇಡಿಕೆ ಇದ್ದರೂ ಅದನ್ನು ಪರಿಗಣಿಸದೇ ಪ್ರಸ್ತುತ ಇರುವ 6021 ಹುದ್ದೆಗಳಲ್ಲಿಯೇ 1500 ಹುದ್ದೆಗಳನ್ನು ಕಡಿಮೆ ಮಾಡಿ ಹಿರಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ನಿಯಮ ಬಾಹಿರವಾಗಿ ಸೃಷ್ಟಿಸಲಾಗಿದೆ. ಇಲಾಖೆ ಇಂತಹ ಎಡವಟ್ಟುಗಳನ್ನು ಮಾಡಿ ಪಿಡಿಓಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ವರ್ಗಾವಣೆಗೆ ನಡೆಸುತ್ತಿರುವ ಕೌನ್ಸಿಲಿಂಗ್ ಪದ್ಧತಿಯಲ್ಲೂ ಹಲವು ಲೋಪಗಳಿವೆ. ಇಲಾಖೆಯ ಶೋಷಣೆಗಳಿಂದ ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ 21 ಪಿಡಿಓಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಅವರ ಕುಟುಂಬಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಸಾಮೂಹಿಕ ರಾಜೀನಾಮೆಗೆ ಪಿಡಿಓಗಳು ತಯಾರಿ ನಡೆಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ಖೋತ, ಅಶ್ವಿನಿ ಕುರುಡಗಿ, ಮಹಾಂತೇಶ ತಳವಾರ, ಸವಿತಾ ಸೋಮಣ್ಣವರ, ಶಿವಲೀಲಾ ಗೂಳಪ್ಪನವರ, ಮಾಲತೇಶ ಮೇವುಂಡಿ, ಎಚ್.ಎಸ್. ಚಟ್ರಿ, ಸಂತೋಷ ಹೂಗಾರ, ಮಂಜುನಾಥ ಗಣಿ, ಲೋಹಿತ ಎಂ., ಎಸ್.ವೈ. ಕುಂಬಾರ, ಯಲ್ಲಪ್ಪ ಕೋರಿ, ವಸಂತ ಗೋಕಾಕ, ಪಕ್ರುದ್ದಿನ್ ನದಾಫ್, ಪ್ರದೀಪ ಆಲೂರ ಇದ್ದರು.

ಗ್ರಾ.ಪಂ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಸೋಮರೆಡ್ಡಿ ನಡವೂರು ಮಾತನಾಡಿ, ಸರ್ಕಾರಿಂದ ಗ್ರಾ.ಪಂಗಳಿಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಪಿಡಿಓಗಳಿಗೆ ಅನಾನುಕೂಲತೆ ಸೃಷ್ಟಿಸುತ್ತಿರುವುದರಿಂದ ಸದಸ್ಯರಿಗೂ ಕಾರ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ಕಾರಣ, ಪಿಡಿಓಗಳ ರಾಜ್ಯ ಮಟ್ಟದ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದೇವೆ ಎಂದರು.

 


Spread the love

LEAVE A REPLY

Please enter your comment!
Please enter your name here