ಲಕ್ನೋ: ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದಆಕಾಶ ಏರ್ ಸಂಸ್ಥೆಯ ವಿಮಾನವು ಇಂಧನ ಕೊರತೆಯಿಂದಾಗಿ ಲಕ್ನೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.
ವಿಮಾನದಲ್ಲಿ 194 ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.
ನಿಗದಿತ ವೇಳಾಪಟ್ಟಿಯಂತೆ ವಿಮಾನವು ಭುವನೇಶ್ವರ ತಲುಪಬೇಕಾಗಿತ್ತು. ಆದರೆ ಅಲ್ಲಿ ಹವಾಮಾನ ಹದಗೆಟ್ಟ ಹಿನ್ನೆಲೆ ರಾತ್ರಿ ವೇಳೆ ವಿಮಾನವನ್ನು ಲಕ್ನೋ ಕಡೆಗೆ ತಿರುಗಿಸಲಾಯಿತು. ಈ ವೇಳೆ ವಿಮಾನದ ಇಂಧನ ಮಟ್ಟ ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪೈಲಟ್ ಗಮನಿಸಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣವೇ ‘ಪ್ಯಾನ್-ಪ್ಯಾನ್’ ತುರ್ತು ಕರೆ ನೀಡಿದ್ದಾರೆ.
ಪೈಲಟ್‌ನ ಸಂದೇಶ ಸಿಕ್ಕ ತಕ್ಷಣ ಲಕ್ನೋ ವಾಯು ಸಂಚಾರ ನಿಯಂತ್ರಣ ಕೇಂದ್ರ ಎಚ್ಚೆತ್ತುಕೊಂಡು ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತು. ರನ್‌ವೇ ಖಾಲಿ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ವಾಹನಗಳು, ವೈದ್ಯಕೀಯ ತಂಡ, ಆಂಬ್ಯುಲೆನ್ಸ್ ಹಾಗೂ ಭದ್ರತಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಯಿತು.
ಎಲ್ಲಾ ಆತಂಕಗಳ ನಡುವೆಯೂ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ರಾತ್ರಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೈಲಟ್ ತಿಳಿಸಿದ ನಂತರ ಅಧಿಕಾರಿಗಳು ನಿರಾಳರಾದರು.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ವಿಮಾನ ಇಳಿದ ಬಳಿಕ ಕೆಲ ಪ್ರಯಾಣಿಕರು ಲಕ್ನೋದಲ್ಲೇ ಇಳಿದಿದ್ದು, ನಂತರ ವಿಮಾನಕ್ಕೆ ಮರು ಇಂಧನ ತುಂಬಿಸಿ ಮುಂದಿನ ಪ್ರಯಾಣಕ್ಕೆ ಸಿದ್ಧಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



