HomePolitics Newsಜಿ.ಎಸ್. ಪಾಟೀಲ್ ವಿಧಾನಸಭೆ ಸ್ಪೀಕರ್ ಆಗಿ ಅವಿರೋಧ ಆಯ್ಕೆ: ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿ ಬಿಜೆಪಿ ಪ್ರತಿಭಟನೆ

ಜಿ.ಎಸ್. ಪಾಟೀಲ್ ವಿಧಾನಸಭೆ ಸ್ಪೀಕರ್ ಆಗಿ ಅವಿರೋಧ ಆಯ್ಕೆ: ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿ ಬಿಜೆಪಿ ಪ್ರತಿಭಟನೆ

For Dai;y Updates Join Our whatsapp Group

ಬೆಂಗಳೂರು: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ್‌ (ಜಿ.ಎಸ್. ಪಾಟೀಲ್‌) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜಿ.ಎಸ್. ಪಾಟೀಲ್‌ ಅವರು ಸ್ಪೀಕರ್‌ ಆಗಿ ಚುನಾಯಿತರಾದರು.

ಸ್ಪೀಕರ್‌ ಚುನಾವಣಾ ಪ್ರಕ್ರಿಯೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಲೆಟರ್‌ಹೆಡ್‌ನಲ್ಲಿ ಪ್ರಕಟಿಸಿದ್ದ ಸಚಿವರ ಪಟ್ಟಿಯಲ್ಲಿ ಸ್ಪೀಕರ್‌ ಹಾಗೂ ಸಭಾಪತಿ ಹುದ್ದೆಗಳ ಹೆಸರುಗಳನ್ನು ಉಲ್ಲೇಖಿಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ಜಿ.ಎಸ್. ಪಾಟೀಲ್‌ ಅವರನ್ನು ವಿಧಾನಸಭಾಧ್ಯಕ್ಷರಾಗಿ ಚುನಾಯಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಸ್ತಾವನೆ ಮಂಡಿಸಿದರು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರು ಪ್ರಸ್ತಾವನೆಯನ್ನು ಅನುಮೋದಿಸಿದರು. ಹಂಗಾಮಿ ಸ್ಪೀಕರ್‌ ಪ್ರಸ್ತಾವನೆಯನ್ನು ಸದನದ ಮತಕ್ಕೆ ಹಾಕಿದ್ದು, ಬಳಿಕ ಅದು ಅಂಗೀಕಾರವಾಯಿತು.

ಚುನಾವಣಾ ಪ್ರಕ್ರಿಯೆ ವೇಳೆ ಸದನ ಬಹಿಷ್ಕರಿಸಿದ್ದ ಬಿಜೆಪಿ ಸದಸ್ಯರು, ಜಿ.ಎಸ್. ಪಾಟೀಲ್‌ ಅವರ ಹೆಸರು ಘೋಷಣೆಯಾದ ಬಳಿಕ ಸದನಕ್ಕೆ ವಾಪಸ್‌ ಬಂದರು. ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಅವರು ನೂತನ ಸ್ಪೀಕರ್‌ ಜಿ.ಎಸ್. ಪಾಟೀಲ್‌ ಅವರನ್ನು ಪೀಠಕ್ಕೆ ಕರೆತಂದು ಕೂರಿಸಿದರು.

ಸ್ಪೀಕರ್‌ ತಲೆಯನ್ನು ವಿಪಕ್ಷಗಳತ್ತ ತಿರುಗಿಸಿದ ಸಿಎಂ

ನೂತನ ಸ್ಪೀಕರ್‌ ಪೀಠಕ್ಕೆ ಆಗಮಿಸಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್‌, ಆರ್‌. ಅಶೋಕ್‌ ಹಾಗೂ ಹಂಗಾಮಿ ಸ್ಪೀಕರ್‌ ಅವರೊಂದಿಗೆ ಫೋಟೋಗೆ ಪೋಸ್‌ ನೀಡಿದರು. ಈ ವೇಳೆ ಅಶೋಕ್‌ ಅವರೊಂದಿಗೆ ಕೈಕುಲುಕುತ್ತಾ ಸದನದತ್ತ ನೋಡುತ್ತಿದ್ದ ಜಿ.ಎಸ್. ಪಾಟೀಲ್‌ ಅವರ ತಲೆಯನ್ನು ಸಿಎಂ ಡಿ.ಕೆ. ಶಿವಕುಮಾರ್‌ ಕೈಯಿಂದ ವಿಪಕ್ಷಗಳತ್ತ ತಿರುಗಿಸಿದರು.

ಈ ವೇಳೆ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌, “ನೀವು ನಿಮ್ಮ ಕೈಯಲ್ಲಿ ತಲೆ ತಿರುಗಿಸಿದರೆ ಆಗುವುದಿಲ್ಲ, ಅವರೇ ನಮ್ಮತ್ತ ತಿರುಗಬೇಕು” ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗೆ ಮೂಡಿತು.

‘ಸ್ಪೀಕರ್‌ ಪೀಠ ಪಕ್ಷಕ್ಕಿಂತ ಎತ್ತರದಲ್ಲಿರಬೇಕು’

ನೂತನ ಸ್ಪೀಕರ್‌ ಜಿ.ಎಸ್. ಪಾಟೀಲ್‌ ಅವರಿಗೆ ಅಭಿನಂದನೆ ಸಲ್ಲಿಸಿದ ವಿಪಕ್ಷ ನಾಯಕ ಆರ್‌. ಅಶೋಕ್‌, “ನಿಮ್ಮ ಪೀಠ ಪಕ್ಷ ಮತ್ತು ವ್ಯಕ್ತಿಗಿಂತ ಎತ್ತರದಲ್ಲಿರಬೇಕು. ಪೀಠದ ಮುಂದೆ ಪಕ್ಷದ ಲೆಟರ್‌ಹೆಡ್‌ನ ನೆರಳು ಇರಬಾರದು, ಸಂವಿಧಾನದ ನೆರಳು ಇರಬೇಕು” ಎಂದು ಹೇಳಿದರು.

ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಸ್ಪೀಕರ್‌ ಹುದ್ದೆಗೆ ಜಿ.ಎಸ್. ಪಾಟೀಲ್‌ ಅವರ ಹೆಸರು ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ಇದು ಸ್ಪೀಕರ್‌ ಹುದ್ದೆಗೆ ಅಗೌರವ ತರುವಂತಹದ್ದು. ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಕಳುಹಿಸುವ ಹುದ್ದೆ ಇದಲ್ಲ. ಮೊದಲ ಬಾರಿಗೆ ಇಂತಹ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿದೆ” ಎಂದು ಟೀಕಿಸಿದರು.

ಮುಂದೆಯೂ ಪಕ್ಷದ ಲೆಟರ್‌ಹೆಡ್‌ನಲ್ಲಿ ನಿರ್ದೇಶನಗಳು ಬಂದರೆ ಅದು ಸಮಸ್ಯೆಯಾಗಲಿದೆ. ಸ್ಪೀಕರ್‌ ಅವರ ತೀರ್ಪು ಕಾಂಗ್ರೆಸ್‌ ಪಕ್ಷದಿಂದ ಬರಬಾರದು, ಸ್ಪೀಕರ್‌ ಅವರಿಂದಲೇ ಬರಬೇಕು. ಇಂತಹ ತಪ್ಪುಗಳು ಮುಂದೆ ನಡೆಯಬಾರದು ಎಂದು ಅಶೋಕ್‌ ಹೇಳಿದರು.

ಹಿಂದಿನ ಸ್ಪೀಕರ್‌ ಕಾರ್ಯವೈಖರಿ ಬಗ್ಗೆ ಅಶೋಕ್‌ ಟೀಕೆ

ಹಿಂದಿನ ಸ್ಪೀಕರ್‌ ಯು.ಟಿ. ಖಾದರ್‌ ಅವರ ಕಾರ್ಯವೈಖರಿ ಕುರಿತು ಮಾತನಾಡಿದ ಅಶೋಕ್‌, ವಿಧಾನಸೌಧದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದರು. 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಸದನದಿಂದ ಅಮಾನತುಗೊಳಿಸಿದ್ದನ್ನೂ ಪ್ರಸ್ತಾಪಿಸಿ, “ಅಂತಹ ನಿಯಮವೇ ಇಲ್ಲ. ಇಂತಹ ಕೆಟ್ಟ ಸಂಪ್ರದಾಯವನ್ನು ಮಾಡಿ ಹೋಗಿದ್ದಾರೆ” ಎಂದು ಟೀಕಿಸಿದರು.

ಅದೇ ವೇಳೆ ಯು.ಟಿ. ಖಾದರ್‌ ಅವರು ಕೆಲವು ಉತ್ತಮ ಕೆಲಸಗಳನ್ನೂ ಮಾಡಿದ್ದಾರೆ. ಅವರನ್ನು ಸಂಪೂರ್ಣವಾಗಿ ಟೀಕಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಸ್ಪೀಕರ್‌ ಜಿ.ಎಸ್. ಪಾಟೀಲ್‌ ಅವರಿಗೆ ಶುಭ ಹಾರೈಸಿದ ಅಶೋಕ್‌, “ಈ ಪೀಠ ನ್ಯಾಯಯುತವಾಗಿರಬೇಕು. ನಿಮ್ಮ ಕುಟುಂಬ ಪೊಲೀಸ್‌ ಪಟೇಲ್‌ ಮನೆತನ. ನೀವು ಜನಸ್ನೇಹಿ ಪೊಲೀಸ್‌ನಂತೆ ಇರಬೇಕು. ಸರ್ಕಾರದ ವಿರುದ್ಧ ಮಾತನಾಡುವುದು ನಮ್ಮ ಕೆಲಸ. ನಾವು ಜನರ ಪರವಾಗಿ ಮಾತನಾಡುತ್ತೇವೆ. ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತು ಇತಿಹಾಸ ಸೃಷ್ಟಿಸಿ, ನಿಮ್ಮದೇ ಛಾಪು ಮೂಡಿಸಿ ಹೋಗಿ” ಎಂದು ಸಲಹೆ ನೀಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img