ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹೆತ್ತ ತಂದೆ-ತಾಯಿಗಳು ಕಣ್ಣಿಗೆ ಕಾಣುವ ನಿಜವಾದ ದೇವರುಗಳು ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಅವರು ಪಟ್ಟಣದ ಶಿಕ್ಷಕ ಮಂಜುನಾಥ ಮಟ್ಟಿ ಇವರ ಮಾತೋಶ್ರೀ ದಿ. ಸಾವಂತ್ರವ್ವ ಬಸವಂತಪ್ಪ ಮಟ್ಟಿ ಇವರ ಸ್ಮರಣಾರ್ಥ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದಲ್ಲಿ ಅವ್ವ ಸೇವಾ ಪ್ರತಿಷ್ಠಾನ ಉದ್ಘಾಟನೆ, ಸಾಧಕರಿಗೆ ಸನ್ಮಾನ ಹಾಗೂ ಉಡದಟ್ಟಿ(ನಾರಿದಟ್ಟಿ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿ, ಕುಟುಂಬದ ಆಧಾರ ಸ್ತಂಭವಾಗಿ ನಿಲ್ಲುವ ತಂದೆ ಕಣ್ಣಿಗೆ ಕಾಣುವ ನಿಜವಾದ ದೇವರುಗಳು. ತಮ್ಮ ಕಷ್ಟಗಳು ಮಕ್ಕಳಿಗೆ ಕಾಣದಂತೆ ಬಡತನದಲ್ಲಿಯೂ ಸಾಕಿ ಸಲುಹಿ, ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಿದ ತಂದೆ-ತಾಯಿಗಳ ಋಣವನ್ನು ತೀರಿಸಿದರೆ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕ ಮಂಜುನಾಥ ಮಟ್ಟಿ ತಮ್ಮ ತಾಯಿಯ ಸ್ಮರಣಾರ್ಥ ಅವ್ವ ಸೇವಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಮಾದರಿಯಾಗಿದ್ದಾರೆ. ಸಮಾಜದಲ್ಲಿ ತಂದೆ-ತಾಯಿಗಳ ಮಹತ್ವ ಸಾರಿ ಶಿಕ್ಷಕ ಮಂಜುನಾಥ ಮಟ್ಟಿ ಸಾರ್ಥಕ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿಯೊಬ್ಬರೂ ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು. ಇದರಿಂದ ಸುಂದರ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.
ಯಲಬುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ್ ಮಾತನಾಡಿ, ತಂದೆ- ತಾಯಿಗಳನ್ನು ದೇವರಂತೆ ಪೂಜಿಸಿದರೆ ನಮ್ಮ ಬಾಳು ಬಂಗಾರವಾಗುತ್ತದೆ. ಮುಪ್ಪಿನ ಕಾಲದಲ್ಲಿ ಪ್ರತಿಯೊಬ್ಬರೂ ತಂದೆ-ತಾಯಿಗಳಿಗೆ ಆಸರೆಯಾಗಬೇಕು. ತಂದೆ-ತಾಯಿಗಳು ಎಂದಿಗೂ ಮಕ್ಕಳಿಗೆ ಒಳಿತನ್ನು ಬಯಸುತ್ತಾರೆ. ಅಂತೆಯೇ ನಾವು ಅವರನ್ನು ಸಾಕಿ ಸಲುಹಿದಾಗ ತಂದೆ-ತಾಯಿಗಳಿಗೆ ಜೀವನ ಸಾರ್ಥಕ ಎನ್ನಿಸುತ್ತದೆ. ಈ ನಿಟ್ಟಿನಲ್ಲಿ ಮಂಜುನಾಥ ವ್ಮಟ್ಟಿಯವರು ಅವ್ವ ಸೇವಾ ಪ್ರತಿಷ್ಠಾನದ ಮೂಲಕ ತಾಯಿಯ ಋಣವನ್ನು ತೀರಿಸಿ, ಸಮಾಜದಲ್ಲಿ ತಾಯಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಅವ್ವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವಂತಪ್ಪ ಮಟ್ಟಿ ವಹಿಸಿದ್ದರು. ಗೌರಮ್ಮಾ ಬಡ್ನಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಹಾದೇವಪ್ಪ ಬಟ್ಟೂರ, ಡಾ. ಎಸ್.ಸಿ. ಚವಡಿ, ಬಸವರಾಜ ಬಿಂಗಿ, ಷಣ್ಮುಖಪ್ಪ ಬಡ್ನಿ, ಯಲಬುರ್ಗ ಬಿಇಓ ಸೋಮಶೇಖರಗೌಡ ಪಾಟೀಲ, ತಿಮ್ಮಣ್ಣ ಚವಡಿ, ಚಂದ್ರಶೇಖರಯ್ಯ ಹಿರೇಮಠ, ಬಿ.ಕೆ. ಹರಪನಹಳ್ಳಿ, ಪಿ.ಎ. ವಂಟಕರ, ಮಂಗಳಾ ನೀಲಗುಂದ, ಪ್ರತಿಭಾ ಬಡ್ನಿ, ಮಹೇಶ ಸಬರದ, ಸಿದ್ದಲಿಂಗಪ್ಪ ಶ್ಯಾಗೋಟಿ, ಡಾ. ಜಯಕುಮಾರ ಬ್ಯಾಳಿ, ಶಿವಕುಮಾರ್ ಎನ್.ಎಲ್, ಗುರುರಾಜ ನರಗುಂದ, ಹನುಮರೆಡ್ಡಿ ಭೀಮರೆಡ್ಡಿ, ವೀರೇಶ ಕುರಿ, ಸಂತೋಷ ಮಳ್ಳಿ ಇದ್ದರು.
ಡಾ. ಎಸ್.ಸಿ. ಚವಡಿ ಮಾತನಾಡಿ, ಅವ್ವ ಸೇವಾ ಪ್ರತಿಷ್ಠಾನದ ಮೂಲಕ ತಾಯಿಯ ಸ್ಮರಣಾರ್ಥ ಸಮಾಜದಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸಿರುವ ಕಾರ್ಯ ಶ್ಲಾಘನೀಯವಾಗಿದೆ. ತಂದೆ-ತಾಯಿಗಳನ್ನು ಗೌರವಿಸಿ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.



