ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಯಲ್ಲಿ ಅರ್ಹತೆ ಪಡೆದಿದ್ದರೂ ಇದುವರೆಗೆ ಯುಜಿಸಿಇಟಿ (UGCET)ಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತೊಂದು ಅವಕಾಶ ಕಲ್ಪಿಸಿದೆ. ಇಂತಹ ಅಭ್ಯರ್ಥಿಗಳಿಗಾಗಿ ಹೊಸ ಅರ್ಜಿ ಸಲ್ಲಿಕೆ ಲಿಂಕ್ ಬಿಡುಗಡೆ ಮಾಡಲಾಗಿದ್ದು, ಜುಲೈ 24ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈವರೆಗೆ ಯುಜಿಸಿಇಟಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಕೆಇಎ ಬಿಡುಗಡೆ ಮಾಡಿರುವ ಹೊಸ ಲಿಂಕ್ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಜೊತೆಗೆ, ಈಗಾಗಲೇ ಯುಜಿಸಿಇಟಿ ಅರ್ಜಿ ಸಲ್ಲಿಸಿರುವ ಹಾಗೂ NEET ಮೂಲಕ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ತಮ್ಮ NEET ರೋಲ್ ನಂಬರ್ ಅನ್ನು ಯುಜಿಸಿಇಟಿ ಅರ್ಜಿಗೆ ಲಿಂಕ್ ಮಾಡಲು ಪ್ರತ್ಯೇಕ ಲಿಂಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಾತಿ ಸಂಪೂರ್ಣವಾಗಿ NEET ರ್ಯಾಂಕ್ ಆಧಾರದಲ್ಲೇ ನಡೆಯಲಿದೆ. ಹೊಸದಾಗಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಕುರಿತ ಸಂಪೂರ್ಣ ವೇಳಾಪಟ್ಟಿ ಮತ್ತು ಮಾರ್ಗಸೂಚಿಗಳನ್ನು ಕೆಇಎ ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.
ಹೊರರಾಜ್ಯದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ
ಕರ್ನಾಟಕೇತರ ಅಭ್ಯರ್ಥಿಗಳು ಕೂಡ ಕೆಇಎ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ನಿಗದಿತ ಅರ್ಜಿ ಶುಲ್ಕ ಪಾವತಿಸಬೇಕು. ಜೊತೆಗೆ ದ್ವಿತೀಯ ಪಿಯುಸಿ ಅಥವಾ ಹೈಯರ್ ಸೆಕೆಂಡರಿ ಪರೀಕ್ಷೆಯ ಅಂಕಗಳನ್ನು ದಾಖಲಿಸಿ, ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇಂತಹ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ದಾಖಲಾತಿ ಪರಿಶೀಲನೆಗೆ ನೇರವಾಗಿ ಹಾಜರಾಗುವ ಅಗತ್ಯವಿರುವುದಿಲ್ಲ.
ಆದರೆ OCI, PIO, NRI, ವಿದೇಶಿ ನಾಗರಿಕರು, ಧಾರ್ಮಿಕ ಅಲ್ಪಸಂಖ್ಯಾತ ಕೋಟಾ, NRI ವಾರ್ಡ್ ಸೌಲಭ್ಯ ಹಾಗೂ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ವಿಶೇಷ ಸೀಟುಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ಲಾಟ್ ಬುಕ್ ಮಾಡಿಕೊಂಡು ನಿಗದಿತ ದಿನಾಂಕದಂದು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಿದೆ. ಈ ಸಂಬಂಧದ ದಿನಾಂಕ ಮತ್ತು ವೇಳಾಪಟ್ಟಿಯನ್ನು ಕೆಇಎ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.



