ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ, ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೆರೋಲ್ ಕೋರಿ ಯಾವುದೇ ಅರ್ಜಿ ಸಲ್ಲಿಸಿಲ್ಲ.
ಕುಟುಂಬದ ನಿರ್ಧಾರದಂತೆ ಹಾಗೂ ತಂದೆ ಹೆಚ್.ಡಿ. ರೇವಣ್ಣ ಅವರ ಸಲಹೆ ಮೇರೆಗೆ ಪೆರೋಲ್‌ಗೆ ಮನವಿ ಸಲ್ಲಿಸದ ಪ್ರಜ್ವಲ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯ ಮೂಲಕ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ವೀಕ್ಷಿಸಲಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಜೈಲಿನಿಂದ ಹೊರಬರುವುದು ಕುಟುಂಬಕ್ಕೆ ಹಾಗೂ ಸಾರ್ವಜನಿಕ ವಲಯದಲ್ಲಿ ಅನಗತ್ಯ ಚರ್ಚೆ ಮತ್ತು ಇರಿಸುಮುರಿಸಿಗೆ ಕಾರಣವಾಗಬಹುದು ಎಂಬ ಕಾರಣದಿಂದ ಪೆರೋಲ್‌ಗೆ ಅರ್ಜಿ ಸಲ್ಲಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಪೆರೋಲ್ ದೊರೆಯಬೇಕಾದರೆ ಕನಿಷ್ಠ ಎರಡು ವರ್ಷಗಳ ಕಾಲ ಶಿಕ್ಷೆ ಅನುಭವಿಸಿರಬೇಕು. ಅಲ್ಲದೆ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಪೆರೋಲ್ ಅಥವಾ ತುರ್ತು ಜಾಮೀನು ಮಂಜೂರು ಆಗುವುದು ಅಪರೂಪವಾಗಿದ್ದು, ಅದಕ್ಕೆ ನ್ಯಾಯಾಲಯ ಹಾಗೂ ಜೈಲು ಆಡಳಿತದ ಅನುಮತಿ ಅಗತ್ಯವಾಗಿರುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ (ಎಸ್‌ಪಿ) ಅಂಶುಕುಮಾರ್, ಪ್ರಜ್ವಲ್ ರೇವಣ್ಣ ಅವರು ಇದುವರೆಗೆ ಪೆರೋಲ್ ಅಥವಾ ತಾತ್ಕಾಲಿಕ ಜಾಮೀನಿಗಾಗಿ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ತೆರಳಲು ಅವಕಾಶ ಇಲ್ಲದ ಕಾರಣ, ಮಾನವೀಯ ನೆಲೆಯಲ್ಲಿ ಜೈಲು ಆಡಳಿತ ಒದಗಿಸುವ ಟಿವಿ ಅಥವಾ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆಯ ಮೂಲಕ ಅಂತಿಮ ವಿಧಿವಿಧಾನಗಳ ನೇರ ಪ್ರಸಾರವನ್ನು ಪ್ರಜ್ವಲ್ ರೇವಣ್ಣ ವೀಕ್ಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

