ಬೆಂಗಳೂರು: ಸಾಲು ಸಾಲು ಬೆಲೆ ಏರಿಕೆಗಳ ನಡುವೆ ರಾಜ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ತುಟ್ಟಿ ಭತ್ಯೆಯನ್ನು (DA) ಶೇ.2.25ರಷ್ಟು ಹೆಚ್ಚಿಸಿ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.15.75ರಿಂದ ಶೇ.18ಕ್ಕೆ ಏರಿಕೆಯಾಗಿದ್ದು, ಪರಿಷ್ಕೃತ ದರವು 2026ರ ಜುಲೈ 1ರಿಂದ ಪೂರ್ವಾನ್ವಯವಾಗಲಿದೆ.
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ (ಸೇವೆಗಳು–2) ಮಂಜುನಾಥ್ ಎಸ್. ಅವರು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದಾರೆ. 2024ರ ಪರಿಷ್ಕೃತ ವೇತನ ಶ್ರೇಣಿಯಡಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಳ ಅನ್ವಯವಾಗಲಿದೆ.
ಸರ್ಕಾರದ ಆದೇಶದ ಪ್ರಕಾರ, 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇ.15.75ರಷ್ಟಿರುವ ತುಟ್ಟಿ ಭತ್ಯೆಯನ್ನು ಶೇ.18ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ.
ಈ ಆದೇಶದಿಂದ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೂ ಅನುಕೂಲವಾಗಲಿದೆ. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರ ತುಟ್ಟಿ ಭತ್ಯೆಯನ್ನೂ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೆ, ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೂ ಈ ಪರಿಷ್ಕೃತ ದರ ಅನ್ವಯವಾಗಲಿದೆ. ಇವರಿಗೂ ಜುಲೈ 1ರಿಂದಲೇ ಹೆಚ್ಚಳದ ಸೌಲಭ್ಯ ದೊರೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯುಜಿಸಿ (UGC), ಎಐಸಿಟಿಇ (AICTE) ಹಾಗೂ ಐಸಿಎಆರ್ (ICAR) ವೇತನ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ರಾಜ್ಯ ಪಿಂಚಣಿದಾರರಾಗಿರುವುದರಿಂದ ಅವರಿಗೂ ಈ ಆದೇಶ ಅನ್ವಯವಾಗಲಿದೆ.
ಇನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯ ವರ್ಕ್ಚಾರ್ಜ್ ನೌಕರರು, ಸರ್ಕಾರದಿಂದ ಪೂರ್ಣ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಯಡಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಾವಧಿ ನೌಕರರೂ ಪರಿಷ್ಕೃತ ತುಟ್ಟಿ ಭತ್ಯೆಗೆ ಅರ್ಹರಾಗಿದ್ದಾರೆ.
ತುಟ್ಟಿ ಭತ್ಯೆ ಹೆಚ್ಚಳದಿಂದ ನೌಕರರ ಮಾಸಿಕ ವೇತನದಲ್ಲಿ ಏರಿಕೆಯಾಗಲಿದೆ. ಉದಾಹರಣೆಗೆ, ₹40,000 ಮೂಲ ವೇತನ ಪಡೆಯುವ ನೌಕರರಿಗೆ ಶೇ.2.25ರಷ್ಟು ಹೆಚ್ಚಳದಂತೆ ತಿಂಗಳಿಗೆ ₹900 ಹೆಚ್ಚುವರಿ ತುಟ್ಟಿ ಭತ್ಯೆ ದೊರೆಯಲಿದೆ. ಅದೇ ರೀತಿ ₹50,000 ಮೂಲ ವೇತನ ಹೊಂದಿರುವ ನೌಕರರಿಗೆ ತಿಂಗಳಿಗೆ ₹1,125 ಹೆಚ್ಚುವರಿ ತುಟ್ಟಿ ಭತ್ಯೆ ಸಿಗಲಿದೆ.
ಪರಿಷ್ಕೃತ ತುಟ್ಟಿ ಭತ್ಯೆ ಜುಲೈ 1ರಿಂದ ಅನ್ವಯವಾಗುವುದರಿಂದ ಹಿಂದಿನ ತಿಂಗಳುಗಳ ವ್ಯತ್ಯಾಸದ ಮೊತ್ತವೂ ಲೆಕ್ಕಕ್ಕೆ ಬರಲಿದೆ. ಆದರೆ, ಬಾಕಿ ಮೊತ್ತದ ಪಾವತಿ ವಿಧಾನ ಹಾಗೂ ಸಮಯವು ಸರ್ಕಾರದ ಆದೇಶದಲ್ಲಿರುವ ಷರತ್ತುಗಳಿಗೆ ಒಳಪಟ್ಟಿರುತ್ತದೆ.









