ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬಳಸಿದ್ದ ‘ಹಳ್ಳಿಗುಗ್ಗು’ ಪದದ ವಿಚಾರವಾಗಿ ರಾಜಕೀಯ ವಾಕ್ಸಮರ ಮುಂದುವರಿದಿದೆ. ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ‘ಹಳ್ಳಿಗುಗ್ಗು’ ಎಂಬುದು ಆಡುಭಾಷೆಯಲ್ಲಿ ಬಳಸುವ ಪದವಾಗಿದ್ದು, ತಾವು ಗ್ರಾಮೀಣ ಜನರನ್ನು ಅವಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
‘ಹಳ್ಳಿಗುಗ್ಗು’ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ನಡೆಸುತ್ತಿರುವ ಅಭಿಯಾನದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಡಿಎಸ್ನವರು ಅಭಿಯಾನ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ನನ್ನನ್ನು ‘ದಲಿತ ಬಲಿತಾ’ ಎಂದು ಪ್ರಶ್ನಿಸಿದಾಗ ಯಾರೂ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
‘ನಾನು ಹೇಳಿದ್ದು ಕುಮಾರಸ್ವಾಮಿ ಅವರ ಪ್ರಶ್ನೆಗಳನ್ನು ಹಳ್ಳಿಗುಗ್ಗು ಕೂಡ ಕೇಳುವುದಿಲ್ಲ ಎಂದು. ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರ ಸಚಿವರಾಗಿರುವವರು ಈ ರೀತಿ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದ್ದೆ. ಗುಗ್ಗು ಎಲ್ಲೇ ಇದ್ದರೂ ಗುಗ್ಗುನೇ. ಹಳ್ಳಿಯಲ್ಲಿದ್ದರೂ ಅಷ್ಟೇ, ನಗರದಲ್ಲಿದ್ದರೂ ಅಷ್ಟೇ. ನಿಮ್ಮ ಮೂರ್ಖತನವನ್ನು ಪ್ರದರ್ಶಿಸಬೇಡಿ’ ಎಂದು ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಅವರ ಹಳ್ಳಿಯ ಮೇಲಿನ ಪ್ರೀತಿಯನ್ನೂ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ‘ಕುಮಾರಸ್ವಾಮಿ ಅವರಿಗೆ ಅಧಿಕಾರದಲ್ಲಿದ್ದಾಗ ಹಳ್ಳಿ ನೆನಪಾಗುವುದಿಲ್ಲ. ಅಧಿಕಾರ ಇದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ ನೆನಪಾಗುತ್ತದೆ. ಅಧಿಕಾರ ಇಲ್ಲದಿದ್ದಾಗ ಮಾತ್ರ ಹಳ್ಳಿ ನೆನಪಾಗುತ್ತದೆಯೇ? ಅಧಿಕಾರ ಇಲ್ಲದಿದ್ದಾಗ ಹಳ್ಳಿಗೆ ಹೋಗಿ ಕಣ್ಣೀರು ಸುರಿಸುವುದೇ?’ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮನ್ನು ಮಣ್ಣಿನ ಮಕ್ಕಳು ಎಂದು ಕರೆದುಕೊಳ್ಳುವ ಕುಮಾರಸ್ವಾಮಿ ಅವರ ವಿರುದ್ಧವೂ ಪ್ರಿಯಾಂಕ್ ಖರ್ಗೆ ಟೀಕಾಪ್ರಹಾರ ನಡೆಸಿದ್ದಾರೆ. ‘ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ನಿಮ್ಮದು ಬೆಂಗಳೂರಿನಲ್ಲಿ ಎಷ್ಟು ರಿಯಲ್ ಎಸ್ಟೇಟ್ ಇದೆ? ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಆಸ್ತಿಗಳಿವೆ. ಯಾವುದಕ್ಕೋ ಯಾವುದನ್ನೋ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಪ್ರಶ್ನಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದ ವಿಚಾರವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ‘ಸ್ಟಿಂಗ್ ಪ್ರಕರಣದಲ್ಲಿ ನೀವು ಎಷ್ಟು ಪ್ರಶ್ನೆಗಳನ್ನು ಕೇಳುತ್ತೀರೋ ಅಷ್ಟೇ ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ಹೇಳಿದ್ದೆ. ಆದರೆ, ಈಗ ಆ ವಿಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಹಳ್ಳಿಗುಗ್ಗು ಪದವನ್ನು ದೊಡ್ಡ ವಿವಾದವನ್ನಾಗಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ತಮ್ಮ ಹೇಳಿಕೆಯಿಂದ ಗ್ರಾಮೀಣ ಜನರಿಗೆ ಅವಮಾನವಾಗಿದೆ ಎಂಬ ಆರೋಪವನ್ನೂ ಪ್ರಿಯಾಂಕ್ ಖರ್ಗೆ ತಳ್ಳಿಹಾಕಿದ್ದಾರೆ. ‘ನಾನು ಹಳ್ಳಿಯ ಜನರನ್ನು ಅವಮಾನಿಸಿಲ್ಲ. ನಾನು ಎಲ್ಲಿಂದ ಬಂದಿದ್ದೇನೆ? ನನ್ನ ಕ್ಷೇತ್ರ ಬೆಂಗಳೂರಿನಲ್ಲಿದೆಯೇ? ಹಳ್ಳಿಗುಗ್ಗು ಎನ್ನುವುದು ಆಡುಭಾಷೆಯಲ್ಲಿ ಬಳಸುವ ಪದ. ಅದಕ್ಕೆ ಬೇರೆ ಅರ್ಥ ಕಲ್ಪಿಸಿ ವಿವಾದ ಸೃಷ್ಟಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ನನ್ನ ಹೇಳಿಕೆಯನ್ನು ಮುಂದಿಟ್ಟುಕೊಂಡು ಜೆಡಿಎಸ್ನವರು ಅಭಿಯಾನ ಮಾಡುತ್ತಿದ್ದಾರೆ. ಮಾಡಲಿ ಬಿಡಿ. ಅವರಿಗೆ ಬೇರೆ ಕೆಲಸವಿಲ್ಲದಿದ್ದರೆ ಮಾಡಿಕೊಳ್ಳಲಿ. ಕೇಂದ್ರ ಸಚಿವರೇ ಇದನ್ನು ದೊಡ್ಡ ವಿಚಾರ ಮಾಡುತ್ತಾರೆ ಎಂದಾದರೆ ಮಾಡಲಿ. ಆದರೆ, ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ’ ಎಂದು ಹೇಳಿದ್ದಾರೆ.
ಕ್ಷಮೆಯಾಚನೆ ವಿಚಾರದಲ್ಲಿಯೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಿಯಾಂಕ್ ಖರ್ಗೆ, ‘ನನ್ನನ್ನು ದಲಿತ ಬಲಿತಾ ಎಂದು ಪ್ರಶ್ನಿಸಿದಾಗ ಅವರು ಕ್ಷಮೆ ಕೇಳಿದ್ದಾರೆಯೇ? ಮೊದಲು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಿ. ನಾನು ಹಳ್ಳಿಯ ಜನರನ್ನು ಅವಮಾನಿಸಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ತಿರುಗೇಟು ನೀಡಿದ್ದಾರೆ.








