ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆ ಕೈಕೊಟ್ಟು ಭೂಮಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ಹಳ್ಳದಕೇರಿ ಓಣಿಯ ರೈತ ಮಹಿಳೆಯರು ಸಾಂಪ್ರದಾಯಿಕ ಗುರ್ಜಿಪೂಜೆ ಆರಂಭಿಸಿದ್ದಾರೆ.
ಮುಂಗಾರು ಪೂರ್ವದಲ್ಲಿ ಸಾಮಾನ್ಯವಾಗಿ ಆಚರಿಸಲಾಗುವ ಈ ಸಂಪ್ರದಾಯದ ಮೂಲಕ ಉತ್ತಮ ಮಳೆಯಾಗಿ ಭೂಮಿ ತೇವಗೊಂಡು ಬಿತ್ತನೆ ಕಾರ್ಯ ಯಶಸ್ವಿಯಾಗಲಿ, ಬೆಳೆ ಸಮೃದ್ಧಿಯಾಗಿ ರೈತರ ಮನೆಗಳಲ್ಲಿ ಧಾನ್ಯ ತುಂಬಲಿ ಎಂದು ಪ್ರಾರ್ಥಿಸಲಾಗುತ್ತದೆ. ಮಳೆ ಹಾಗೂ ಕೃಷಿ ಅವಿನಾಭಾವ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಗುರ್ಜಿಪೂಜೆಯನ್ನು ಪ್ರಕೃತಿ ಆರಾಧನೆಯ ರೂಪದಲ್ಲಿಯೂ ಕಾಣಲಾಗುತ್ತದೆ.
ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬಿತ್ತನೆ ಮಾಡಿದ ಕೆಲವೆಡೆ ಬೆಳೆಗಳು ಒಣಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ನೀರು ಹಾಗೂ ಮೇವಿನ ಕೊರತೆಯ ಆತಂಕವೂ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಹಿಂಗಾರು ಹಂಗಿನಲ್ಲಾದರೂ ಉತ್ತಮ ಮಳೆಯಾಗಿ ಒಣಗಿದ ಭೂಮಿಗೆ ಜೀವ ದೊರೆಯಲಿ, ಹೊಲಗಳು ಹಸಿರಾಗಲಿ, ಕೆರೆ-ಕಟ್ಟೆಗಳು ತುಂಬಲಿ, ಜಾನುವಾರುಗಳಿಗೆ ನೀರು-ಮೇವು ದೊರೆಯಲಿ ಹಾಗೂ ರೈತರ ಸಂಕಷ್ಟ ದೂರವಾಗಲಿ ಎಂದು ಮಹಿಳೆಯರು ಗುರ್ಜಿಪೂಜೆ ಮೂಲಕ ಪ್ರಾರ್ಥಿಸಿದರು.
ಸಿದ್ದಮ್ಮ ಗಡೇದ, ಲಕ್ಷ್ಮವ್ವ ದಾನಿ, ನೀಲವ್ವ ಗೊರವರ, ನೀಲಮ್ಮ ಸಾಲಾವಳಿಮಠ, ಮಾಲಾ ರಡ್ಡೇರ, ರೇಣುವ್ವ ಬೂದಿಹಾಳ, ರೇಣುಕಾ ದಾನಿ ಹಾಗೂ ಶಿವಕ್ಕ ಸಾಲಾವಳಿಮಠ ಸೇರಿದಂತೆ ರೈತ ಮಹಿಳೆಯರು ಪಾಲ್ಗೊಂಡಿದ್ದರು.



