ಶಿವಜ್ಞಾನದ ಅರಿವಿಗೆ ಗುರು ಕಾರುಣ್ಯ ಅವಶ್ಯಕ

0
kalaghatagi
Spread the love

ವಿಜಯಸಾಕ್ಷಿ ಸುದ್ದಿ, ಕಲಘಟಗಿ : ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವನ ಬಿಟ್ಟು ಶಕ್ತಿ, ಶಕ್ತಿ ಬಿಟ್ಟು ಶಿವನಿಲ್ಲ. ಶಿವಜ್ಞಾನದ ಸಂಪತ್ತಿನ ಅರಿವಿಗಾಗಿ ಗುರು ಕಾರುಣ್ಯ ಅತ್ಯಂತ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ತಾಲೂಕಿನ ಬೇಗೂರು ಗ್ರಾಮದಲ್ಲಿ ಗ್ರಾಮದೇವತೆಯ ನೂತನ ದೇವಾಲಯ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ದೇವರು ಕೊಟ್ಟ ಕೊಡುಗೆ ಸಾಮಾನ್ಯವಾದುದಲ್ಲ. ಅರಿವುಳ್ಳ ಮಾನವ ಜೀವನದ ಜೊತೆಗೆ ಮನುಷ್ಯ ಬದುಕಿ ಬಾಳಲು ನೆಲ, ಜಲ, ಅನ್ನ, ಗಾಳಿ ಮೊದಲಾದ ಅಮೂಲ್ಯ ವಸ್ತುಗಳನ್ನು ಕರುಣಿಸಿದ್ದಾನೆ. ದೇವರ ಮೇಲಿನ ನಂಬಿಕೆ ಕಳೆದುಕೊಳ್ಳಬಾರದು. ನಂಬಿಕೆಯಿದ್ದರೆ ಕಲ್ಲು ಕೂಡಾ ದೇವರಾಗಿ ಕಾಣುತ್ತದೆ. ನಂಬಿಕೆ ಕಳೆದುಕೊಂಡರೆ ದೇವರು ಧರ್ಮ ಇಲ್ಲವೇ ಇಲ್ಲ. ದೇವರು, ಗುರು, ಮಂತ್ರ, ವೈದ್ಯ, ತೀರ್ಥ ಇವುಗಳಲ್ಲಿ ಯಾವ ನಂಬಿಕೆ ಇಟ್ಟು ನಡೆಯುತ್ತೇವೆಯೋ ಆ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹಳೆಯದಾದ ಗ್ರಾಮ ದೇವತೆ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಇಂದು ದೇವತಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಕಳಸರೋಹಣ ನೆರವೇರಿಸಿದ್ದು ಸಂತೊಷದ ಸಂಗತಿ ಎಂದರು.

ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು.

ಸಮಾರಂಭವನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನೇತೃತ್ವವನ್ನು ಎಂ.ಚಂದರಗಿ-ಕಟಕೋಳ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಿ ಉಪದೇಶಾಮೃತವನ್ನಿತ್ತರು. ಸಮಾರಂಭದ ಸಮ್ಮುಖವನ್ನು ಕಲಘಟಗಿ ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.


Spread the love

LEAVE A REPLY

Please enter your comment!
Please enter your name here