ಬಾಗಲಕೋಟೆ: ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿದ ತಕ್ಷಣ ಹೆಂಡತಿಗೂ ಹೃದಯಾಘಾತವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ. ಈ ಮೂಲಕ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಮೃತರಾದವರು ಶಶಿಧರ ಪತ್ತಾರ (40) ಮತ್ತು ಪತ್ನಿ ಸರೋಜಾ (35). ಸೋಮವಾರ ಶಶಿಧರ್ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಗಂಡನ ಸಾವಿನ ಸುದ್ದಿ ತಿಳಿದ ತಕ್ಷಣ ಆಘಾತಗೊಂಡ ಪತ್ನಿ ಸರೋಜಾ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಹದಿನೈದು ವರ್ಷಗಳ ಹಿಂದೆ ಇಬ್ಬರಿಗೂ ಮದುವೆಯಾಗಿತ್ತು. ಮೃತರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದೇ ಸಮಯದಲ್ಲಿ ಗಂಡ ಹೆಂಡತಿ ಮೃತಪಟ್ಟಿರುವುದು, ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.
ಶಶಿಧರ್ ಅವರು ಜೀವನೋಪಾಯಕ್ಕಾಗಿ ಚಿನ್ನದ ಅಂಗಡಿ ನಡೆಸುತ್ತಿದ್ದರು. ಅವರಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿದ್ದವು ಎನ್ನಲಾಗಿದೆ.


