ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳ ಅಟ್ಟಹಾಸ ಜೋರಾಗಿಯೇ ಇದೆ. ಹುಡುಗಿಯರು, ಮಹಿಳೆಯರು ಎನ್ನದೆ ಈ ಕಿರಾತಕರು ದೌರ್ಜನ್ಯ ಎಸಗುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ವಾ ಎಂಬ ಪ್ರಶ್ನೆ ಉದ್ಭವಿಸಿದೆ.
ಇದೀಗ ಸಂಜೆ 6 ಗಂಟೆ ಆದ್ರೆ ಒಂಟಿಯಾಗಿ ಓಡಾಡೋ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಸೈಕೋ ಪಾತ್‌ನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ವಿನೋದ್ ಬಂಧಿತ ಆರೋಪಿಯಾಗಿದ್ದು, ಕಳೆದ ಒಂದು ತಿಂಗಳಿಂದ ಇದೇ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದದ್ದು ವಿಚಾರಣೆಯಲ್ಲಿ ಬಯಲಾಗಿದೆ.
ಡಿಸೆಂಬರ್ 2ರಂದು ಸುಂಕದಕಟ್ಟೆಯ ಶ್ರೀನಿವಾಸ ಸರ್ಕಲ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ರಸ್ತೆ ಗುಂಡಿಯಿಂದಾಗಿ ವೇಗ ಕಡಿಮೆ ಮಾಡಿದಾಗ, ವಿನೋದ್ ತಕ್ಷಣ ಓಡಿ ಬಂದು ಆಕೆಯನ್ನು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದ. ಈ ವೇಳೆ ಹಿಂದೆ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಕಾಮುಕ ತಪ್ಪಿಸಿಕೊಂಡು ಪರಾರಿಯಾಗಿದ್ದ.
ತಕ್ಷಣ 112ಕ್ಕೆ ಕರೆ ಮಾಡಲಾಗಿದ್ದು, ಹೊಯ್ಸಳ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ಇದುವರೆಗೆ ಯಾರೂ ದೂರು ನೀಡದ ಕಾರಣ ತನ್ನ ವಿಕೃತ ಕೃತ್ಯಗಳನ್ನು ಮುಂದುವರಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



