ಮಡಿಕೇರಿ: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು, ಬೈಕ್‌ನ್ನು ಓವರ್‌ಟೇಕ್ ಮಾಡುವ ವೇಳೆ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿದ ಕಾರು ಪಿಕ್‌ಅಪ್ ವಾಹನಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಮೂವರು ಮೃತಪಟ್ಟಿದ್ದಾರೆ.
ಮೃತರಲ್ಲಿ ಸ್ವಿಫ್ಟ್ ಕಾರು ಚಾಲಕ ರತನ್ ಅಲಿಯಾಸ್ ಉಣ್ಣಿ ಹಾಗೂ ಮಡಿಕೇರಿ ಅರಣ್ಯ ಇಲಾಖೆಯ ವಾಚ್‌ಮೆನ್ ಕುಮಾರ್ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದವರು ಗುಡ್ಡೆಹೊಸೂರಿನಲ್ಲಿ ನಡೆದ ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದ ಸುವಿನ್, ಆದರ್ಶ್, ಚಂದ್ರಶೇಖರ್ ಹಾಗೂ ಅಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆಲವರನ್ನು ಮಡಿಕೇರಿ ಮತ್ತು ಮೈಸೂರಿಗೆ ರವಾನಿಸಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಶಾಲನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರು ಹಾಗೂ ಗಾಯಾಳುಗಳ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ.



