ಮಂಡ್ಯ: ತಾಯಿ ಬೈದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ಸಹೋದರಿಯರು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮನೆಯಿಂದ ತೆರಳುವ ಮುನ್ನ ಅವರು ಬರೆದಿಟ್ಟಿರುವ ಭಾವುಕ ಪತ್ರ ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸುಜಾತಾ (16) ಮತ್ತು ರುಕ್ಮಿಣಿ (14) ಎಂಬ ಸಹೋದರಿಯರು ತಮ್ಮ ತಂದೆ ರಾಮಚಂದ್ರ ಅವರ ಮನೆಯಿಂದ ಕಾಣೆಯಾಗಿದ್ದಾರೆ. ಕುಟುಂಬದವರ ಮಾಹಿತಿ ಪ್ರಕಾರ, ಮನೆಯಲ್ಲಿನ ಸಣ್ಣ ವಿಚಾರಕ್ಕೆ ತಾಯಿ ಬೈದಿದ್ದರು ಎನ್ನಲಾಗಿದೆ.
ಮನೆಯಲ್ಲೇ ಬರೆದಿಟ್ಟು ಹೋಗಿರುವ ಪತ್ರದಲ್ಲಿ, ‘ಅಮ್ಮ-ಅಪ್ಪ ಸಾರಿ… ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ. ನಾವು ದೂರ ಹೋಗಿ ಸತ್ತಿದ್ದೇವೆ’ ಎಂದು ಉಲ್ಲೇಖಿಸಲಾಗಿದೆ. ಈ ಬರಹ ಕಂಡ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ ಪೋಷಕರು ಮಕ್ಕಳ ಪತ್ತೆಗೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಕಡೆಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆತಂಕದಲ್ಲಿದ್ದು, ಬಾಲಕಿಯರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.



