ಸೂಪರ್‌ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಶೇಷ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಶ್ರೀ ರವಿಶಂಕರ್ ಆಶ್ರಮದಲ್ಲಿ ನಡೆದ ಒಂದು ಘಟನೆ ತಮ್ಮ ಅಹಂಕಾರವನ್ನು ಹೇಗೆ ಮಣ್ಣುಪಾಲು ಮಾಡಿತು ಎಂಬುದನ್ನು ಹಂಚಿಕೊಂಡರು.
‘ನಾನು ಆಶ್ರಮಕ್ಕೆ ಎರಡು ದಿನ ಮಾತ್ರ ಹೋಗಿದ್ದೆ. ಆದರೆ ಅಲ್ಲಿನ ವಾತಾವರಣ ನೋಡಿ 15 ದಿನ ಉಳಿದುಬಿಟ್ಟೆ. ಸುತ್ತಲೂ ಹಸಿರು, ಕೆರೆ, ಪ್ರಾಣಿಗಳು, ಸಂತೋಷದಿಂದಿರುವ ಜನರನ್ನು ನೋಡಿ ಮನಸ್ಸಿಗೆ ತುಂಬಾ ಶಾಂತಿ ಸಿಕ್ಕಿತ್ತು. ಅಲ್ಲಿನ ಒಂದು ಕುದುರೆಯ ಹೆಸರು “ರಜಿನಿ” ಎಂದು ಕೇಳಿ ನನಗೆ ಆಶ್ಚರ್ಯವಾಯಿತು’ ಎಂದು ಅವರು ಹೇಳಿದರು.
ಮುಂದೆ ಮಾತನಾಡಿದ ರಜನಿಕಾಂತ್, ‘ಆ ಸಮಯದಲ್ಲಿ ನಾನು ವೃತ್ತಿಜೀವನದ ಪೀಕ್‌ನಲ್ಲಿದ್ದೆ. ಗುರೂಜಿ ಆಶ್ರಮದ ಸುತ್ತ ಒಂದು ಸುತ್ತು ಹಾಕೋಣ ಎಂದರು. ಜನರು ನನ್ನನ್ನು ಗುರುತಿಸಿ ಆಟೋಗ್ರಾಫ್ ಕೇಳಬಹುದು ಎಂದು ನಾನು ಭಾವಿಸಿದ್ದೆ. ಆದರೆ ಅಲ್ಲಿ ಯಾರೂ ನನ್ನತ್ತ ನೋಡಲೇ ಇಲ್ಲ’ ಎಂದು ನಗುತ್ತಲೇ ಹೇಳಿದರು.
‘ನಾನು ಕೈಬೀಸುತ್ತಿದ್ದರೂ ಯಾರೂ ಪ್ರತಿಕ್ರಿಯಿಸಲಿಲ್ಲ. ಆಗ ನನಗೆ ದೊಡ್ಡ ಪಾಠ ಸಿಕ್ಕಿತು. ಅಧ್ಯಾತ್ಮದ ಮುಂದೆ ಸಿನಿಮಾ ಸ್ಟಾರ್‌ಡಮ್ ತುಂಬಾ ಚಿಕ್ಕದು ಅನ್ನೋದು ಅರ್ಥವಾಯಿತು’ ಎಂದು ಅವರು ಹೇಳಿದರು.
ಸಿನಿಮಾ ಖ್ಯಾತಿ ಕ್ಷಣಿಕ, ಆದರೆ ಆಧ್ಯಾತ್ಮಿಕ ಶಕ್ತಿ ಶಾಶ್ವತ ಎಂದು ಹೇಳಿದ ರಜನಿಕಾಂತ್, ‘ಆಧ್ಯಾತ್ಮಿಕ ಸ್ಟಾರ್‌ಡಮ್ ಸಾವಿನ ನಂತರವೂ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.



